ಚಿಕ್ಕಮಗಳೂರು: ಮುಂದಿನ ಒಂದು ತಿಂಗಳೊಳಗೆ ಚಿಕ್ಕಮಗಳೂರಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಮಗಳೂರಿನ ಕಡೂರಿನಲ್ಲಿ ಘೋಷಣೆ ಮಾಡಿದ್ದಾರೆ. ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಬಿಜೆಪಿ ಸಂಕಲ್ಪ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು 32 ಲಕ್ಷ ರೈತರಿಗೆ 20 ಸಾವಿರ ಕೋಟಿಗಿಂತ ಹೆಚ್ಚು ಸಾಲ ನೀಡಿದ್ದೇವೆ. ಕಡೂರು ಕ್ಷೇತ್ರದ ಅಭಿವೃದ್ಧಿಗೆ 2,800 ಕೋಟಿ ಅನುದಾನ ನೀಡಿದ್ದೇವೆ ಎಂದು ತಿಳಿಸಿದರು.
ಬೆಳೆ ಕಳೆದುಕೊಂಡ ರೈತರಿಗೆ ಒಂದೂವರೆ ತಿಂಗಳಲ್ಲೇ ಪರಿಹಾರ ನೀಡಿದ್ದೇವೆ. 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ ಶಾಲಾ ಕೊಠಡಿ ನಿರ್ಮಾಣ ಪೂರ್ಣಗೊಳಿಸುತ್ತೇವೆ. 50 ಸಾವಿರ ತಾಂಡಾಗಳಿಗೆ ನಾವು ಹಕ್ಕು ಪತ್ರ ನೀಡುತ್ತಿದ್ದೇವೆ. 3 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಿದ್ದೇವೆ. 6 ಸಾವಿರ ಕಿ.ಮೀ. ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ಅನುಮೋದನೆ ದೊರೆತಿದೆ. ಇದು ನಿಜವಾದ ಸಾಮಾಜಿಕ ನ್ಯಾಯ ಎಂದು ಹೇಳಿದರು.
ವಿಪಕ್ಷನಾಯಕ ಸಿದ್ದರಾಮಯ್ಯನವರಿಗೆ ಹಳದಿ ಕಣ್ಣುಗಳಿವೆ
ಜನಸಂಕಲ್ಪ ಸಮಾವೇಶದಲ್ಲಿ ಜನರೇ ಇಲ್ಲ ಅಂತ ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯನವರಿಗೆ ಹಳದಿ ಕಣ್ಣುಗಳಿವೆ. ಜನಸಂಕಲ್ಪ ಸಮಾವೇಶದಲ್ಲಿ ಜನರೇ ಇಲ್ಲ ಅಂತಾ ಹೇಳುತ್ತಿರುತ್ತಾರೆ. ಇಲ್ಲಿ ಸೇರಿರುವ ಜನಸಮೂಹವನ್ನು ಸಿದ್ದರಾಮಯ್ಯ ನೋಡಲಿ. ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿನ ಹಗರಣಗಳನ್ನ ಜನರು ಮರೆತಿಲ್ಲ. ನೀರಾವರಿ, ಅನ್ನಭಾಗ್ಯ ಸೇರಿದಂತೆ ಹಲವು ಯೋಜನೆಯಲ್ಲಿ ಹಗರಣಗಳಾಗಿವೆ ಎಂದು ಆರೋಪಿಸಿದರು.
ಅಹಿಂದಕ್ಕೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ
ಅಹಿಂದಕ್ಕೆ ಸಿದ್ದರಾಮಯ್ಯ ಕೊಡುಗೆ ಏನೂ ಇಲ್ಲ. ಅಹಿಂದ ಹೆಸರೇಳಿ ಸಿದ್ದರಾಮಯ್ಯ ಮಾತ್ರ ಮುಂದಕ್ಕೆ ಹೋದರು. ಸಿದ್ದರಾಮಯ್ಯ ಸರ್ಕಾರದಿಂದ ಅಹಿಂದಕ್ಕೆ ಸಾಮಾಜಿಕ ನ್ಯಾಯ ಸಿಗಲಿಲ್ಲ. ಸಿದ್ದರಾಮಯ್ಯನವರೆ ನೀವು ಧರ್ಮ ಒಡೆಯುವ ಪ್ರಯತ್ನ ಮಾಡಿದ್ದೀರಿ. ಇದನ್ನು ಜನರು ಮರೆತಿಲ್ಲ, ಸಿದ್ದರಾಮಯ್ಯ ಅವಧಿಯಲ್ಲಿ 20ಕ್ಕೂ ಹೆಚ್ಚು ಕೊಲೆಗಳಾಗಿವೆ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ಗೆ ಮತ ಹಾಕಿದರೇ ಸಿಎಂ ಆಗುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಜನ ಬೆಂಬಲ ಅಲ್ಲ, ಮೊದಲು ಡಿಕೆಶಿ ಬೆಂಬಲವನ್ನು ಪಡೆಯಲಿ, ಸಿದ್ದರಾಮಯ್ಯಗೆ ಡಿ.ಕೆ ಶಿವಕುಮಾರ ಬೆಂಬಲವೇ ಇಲ್ಲ, ಜನ ಬೆಂಬಲ ಹೇಗೆ ಕೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ
2013ರಲ್ಲಿ ಇದೇ ರೀತಿ ಹೇಳಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಅವಧಿಯಲ್ಲಿ ಅನ್ನಕ್ಕೆ ಕನ್ನ ಹಾಕಿದ್ದನ್ನು ಜನ ಮರೆತಿಲ್ಲ. ಸಣ್ಣ ನೀರಾವರಿಯಲ್ಲಿ ಶೇ 100 ರಷ್ಟು ಕಮಿಷನ್ ಹೊಡೆದಿದ್ದನ್ನ ಮರೆತಿಲ್ಲ. ಸಿದ್ದರಾಮಯ್ಯ ಧರ್ಮ ಒಡೆಯಲು ಯತ್ನಿಸಿದ್ದನ್ನೂ ಮರೆತಿಲ್ಲ. ಯಾವ ಸುಖಕ್ಕೆ ನಿಮ್ಮನ್ನು ಸಿಎಂ ಮಾಡಬೇಕೆಂದು ನೀವೇ ಹೇಳಿ ಎಂದು ಕಿಡಿಕಾರಿದ್ದಾರೆ.