ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಮೊಬೈಲ್ ಕಸಿದು ಪರಾರಿಯಾಗುವಾಗ ಬೆನ್ನಟ್ಟಿದ್ದ ಫುಡ್ ಡೆಲಿವರಿ ಬಾಯ್ಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಪಂಗಿ ರಾಮನಗರದ ನಿವಾಸಿ ಟೋನಿ (23) ಬಂಧಿತ. ಆರೋಪಿಯಿಂದ ನಾಲ್ಕು ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಈತನ ಸಹಚರ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ಜಯನಗರ 2ನೇ ಹಂತದ ನಿವಾಸಿ ಅನುಶಾ ವಲ್ಲೂರಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಯನಗರ 2ನೇ ಹಂತದ ಪೇಯಿಂಗ್ ಗೆಸ್ಟ್ನಲ್ಲಿ ನೆಲೆಸಿದ್ದ ಅನುಶಾ ವಲ್ಲೂರಿ ಅ.18ರ ಮಧ್ಯಾಹ್ನ 2.30ರ ಸುಮಾರಿಗೆ ಕಚೇರಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ಇಬ್ಬರು ದುಷ್ಕರ್ಮಿಗಳು, ಅನುಶಾ ಅವರ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ವೇಳೆ ಅನುಶಾ ಸಹಾಯಕ್ಕೆ ಕೂಗಿಕೊಂಡಾಗ ಸ್ಥಳೀಯರು ಗುಂಪುಗೂಡಿದ್ದಾರೆ. ಫುಡ್ ಡೆಲಿವರಿ ಬಾಯ್ ಸೂರ್ಯ ಸ್ಥಳಕ್ಕೆ ಬಂದು ಯುವತಿಯನ್ನು ಕೇಳಿದಾಗ, ದುಷ್ಕರ್ಮಿಗಳು ಮೊಬೈಲ್ ಕಸಿದುಕೊಂಡು ಪರಾರಿಯಾದ ಬಗ್ಗೆ ಹೇಳಿದ್ದಾರೆ.
ಮೊಬೈಲ್ ನೆಟ್ವರ್ಕ್ ಟ್ರ್ಯಾಕ್: ಬಳಿಕ ಎಚ್ಚೆತ್ತ ಸೂರ್ಯ, ಫೈಂಡ್ ಮೈ ಆ್ಯಪ್ಗೆ ಅನುಶಾ ಅವರ ಮೊಬೈಲ್ ಸಂಖ್ಯೆ ಹಾಕಿ ಮೊಬೈಲ್ ನೆಟ್ವರ್ಕ್ ಟ್ರ್ಯಾಕ್ ಮಾಡಿಕೊಂಡು ಸ್ನೇಹಿತರೊಂದಿಗೆ ಸುಧಾಮ ನಗರದ ಟೀ ಅಂಗಡಿ ಬಳಿಗೆ ತೆರಳಿದ್ದಾರೆ. ಈ ವೇಳೆ ಆರೋಪಿಗಳು ಅಲ್ಲೇ ಟೀ ಕುಡಿಯುತ್ತ ನಿಂತಿರುವುದನ್ನು ಗಮನಿಸಿ, ಯುವತಿಯ ಮೊಬೈಲ್ ವಾಪಾಸ್ ಕೊಡುವಂತೆ ಕೇಳಿದ್ದಾರೆ. ಈ ವೇಳೆ ಸೂರ್ಯ ಮತ್ತು ಆರೋಪಿಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ.
ಸಿಕ್ಕಿ ಬೀಳುವ ಭಯದಲ್ಲಿ ಆರೋಪಿ ಟೋನಿ ಹಾಗೂ ಆತನ ಸಹಚರ ಏಕಾಏಕಿ ಚಾಕು ತೆಗೆದು ಸೂರ್ಯನ ಮುಖದ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ಸಿದ್ದಾಪುರ ಠಾಣೆಗೆ ತೆರಳಿ ಮೊಬೈಲ್ ಕಿತ್ತುಕೊಂಡು ಹೋದ ಬಗ್ಗೆ ದೂರು ನೀಡಿದ್ದರು. ಬಳಿಕ ಗಾಯಾಳು ಸೂರ್ಯ ತನ್ನ ಮೇಲಾದ ಹಲ್ಲೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಘಟನಾ ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳ ಸುಳಿವು ಪತ್ತೆಹಚ್ಚಿದ ಸಿದ್ದಾಪುರ ಠಾಣೆ ಪೊಲೀಸರು, ಆರೋಪಿ ಟೋನಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.