ಕೂಗು ನಿಮ್ಮದು ಧ್ವನಿ ನಮ್ಮದು

ಕಲ್ಪನಾ ಕಾಂಗ್ರೆಸ್‌ ಸೇರಿದರೆ ಅಭ್ಯಂತರವಿಲ್ಲ’

ಮದ್ದೂರು: ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಕಾಂಗ್ರೆಸ್‌ ಸೇರಿದರೆ ನಮ್ಮ ಅಭ್ಯಂತರವಿಲ್ಲ. ಅದನ್ನು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಡಲಾಗುವುದು ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಗುರುಚರಣ್‌ ಭಾನುವಾರ ಹೇಳಿದರು.

ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಗರಕೆರೆ ಗ್ರಾಪಂ ವೈದ್ಯನಾಥಪುರ, ನಗರಕೆರೆ, ಸೋಂಪುರ, ಉಪ್ಪಾರದೊಡ್ಡಿ, ಹುಲಿಗೆರೆಪುರ ಹಾಗೂ ಮಾಲಗಾರನಹಳ್ಳಿಗಳಲ್ಲಿ ಮನೆ ಮನೆಗೆ ಕಾಂಗ್ರೆಸ್‌ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದರು. ತದ ನಂತರ 2018ರ ಚುನಾವಣೆಯಲ್ಲಿ ಕಲ್ಪನಾ ಕಾಂಗ್ರೆಸ್‌ ತೊರೆದು ಮತ್ತೆ ಜೆಡಿಎಸ್‌ ಸೇರ್ಪಡೆಗೊಂಡರು. ಚುನಾವಣೆಯಲ್ಲಿ ಕಲ್ಪನಾರನ್ನು ಬಳಸಿಕೊಂಡ ಜೆಡಿಎಸ್‌ ವರಿಷ್ಠರು ಆಕೆಗೆ ಯಾವುದೇ ಸ್ಥಾನಮಾನ ನೀಡದೆ ಕಡೆಗಣಿಸಿದ್ದಾರೆ. ಇದು ಅವರ ಬೆಂಬಲಿಗರಿಗೆ ಸಹಜವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಸರಳ, ಸಜ್ಜನಿಕೆಯ ರಾಜಕಾರಣಿಯಾದ ಕಲ್ಪನಾ ಸಿದ್ದರಾಜು, ಈಗ ಮತ್ತೆ ಕಾಂಗ್ರೆಸ್‌ ಸೇರಿದರೆ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತದೆ. ಹೀಗಾಗಿ ಅವರು ಕಾಂಗ್ರೆಸ್‌ ಸೇರುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದರು.

ಕಲ್ಪನಾ ಕಾಂಗ್ರೆಸ್‌ ಸೇರ್ಪಡೆ ವಿಚಾರವನ್ನು ಪಕ್ಷದ ವರಿಷ್ಠರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲೆಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುತ್ತಿರುವ ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆಯನ್ನು ಕೊಲೆ ಮಾಡುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಮುಖಂಡ ಮಣಿಕಂಠ ರಾಥೋಡ್‌ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, ಕಾಂಗ್ರೆಸ್‌ ಸರ್ಕಾರವಿದ್ದಾಗ ಅವರಿಗೆ ಭದ್ರತೆ ಇತ್ತು. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಭದ್ರತೆ ಹಿಂಪಡೆದಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಸರ್ಕಾರದ ಬಿಟ್‌ ಕಾಯಿನ್‌, ಪಿಎಸ್‌ಐ, ಗಂಗಾ ಕಲ್ಯಾಣ ಸೇರಿದಂತೆ ಹಲವು ಹಗರಣಗಳನ್ನು ಪ್ರಿಯಾಂಕ್‌ ಖರ್ಗೆ ಬಯಲಿಗೆಳೆದಿದ್ದಾರೆ. ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಸರ್ಕಾರ ಹೊಂಚು ಹಾಕುತ್ತಿದೆ. ಇನ್ನಾದರೂ ಎಚ್ಚೆತ್ತು ಅವರಿಗೆ ಭದ್ರ ನೀಡಬೇಕು. ರಾಥೋಡ್‌ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್‌ ಪರಿಶಿಷ್ಟಜಾತಿ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್‌ ಕಂಠಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿ. ನಾಗೇಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ. ಸಂದರ್ಶ, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ಪಿ.ರಾಘವ, ಗ್ರಾಪಂ. ಸದಸ್ಯ ರಾಜೇಶ್‌, ಮುಖಂಡರಾದ ಪುರುಷೋತ್ತಮ, ಪುನೀತ್‌ ಮತ್ತಿತರರಿದ್ದರು.

ಸಿದ್ದು ಕೋಲಾರದಲ್ಲಿ ಸ್ಪರ್ಧಿಸಿದರೆ ಅಭ್ಯರ್ಥಂತರವಿಲ್ಲ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವುದರಿಂದ ನಮ್ಮ ಪಕ್ಷಕ್ಕೇನೂ ಆತಂಕವಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ ಹಾಗೂ ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ. ಅವರು ಮಾಜಿ ಮುಖ್ಯಮಂತ್ರಿಗಳು. ಸಚಿವರಾಗಿದ್ದವರು. ಉಪಮುಖ್ಯಮಂತ್ರಿಯಾಗಿದ್ದವರು. ಅವರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಅವರಿಗೆ ಕ್ಷೇತ್ರವೇ ಇಲ್ಲ ಎಂಬ ಕ್ಷುಲ್ಲಕ ಮಾತುಗಳು ನಮಗೆ ಅಗತ್ಯವಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ ಎಂಬ ಕಾರಣಕ್ಕೆ ಕೋಲಾರದಲ್ಲಿ ನಮ್ಮ ಯಾವುದೇ ಕಾರ್ಯತಂತ್ರ ಬದಲಾಗಲ್ಲ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳಿದ್ದಾರೆ. ಸಿದ್ದರಾಮಯ್ಯ ಅಷ್ಟೆಅಲ್ಲ, ಯಾರೇ ನಿಂತರೂ ನಮ್ಮ ಪಕ್ಷಕ್ಕೆ ಆತಂಕ ಇಲ್ಲ ಎಂದರು.

ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಎಂದರೆ ನಮ್ಮ ಪಕ್ಷಕ್ಕೆ ಕೈಕೊಟ್ಟು ಹೋದ ಹಾಲಿ ಶಾಸಕ ಶ್ರೀನಿವಾಸ್‌ಗೌಡ. ಅವರು ನಮಗೆ ಮಾಡಿದ ದ್ರೋಹವೇ ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮುಳುವಾಗಲಿದೆ. ಸಿದ್ದರಾಮಯ್ಯ ಅವರಿಗೆ ನಕಾರಾತ್ಮಕ ಅಂಶಗಳು ಇರುವುದೇ ಅಲ್ಲಿ ಎಂದು ತಿಳಿಸಿದರು.

error: Content is protected !!