ಹಾವೇರಿ: ಕೆಲವೊಂದಿಷ್ಟು ಪಡ್ಡೆ ಹುಡುಗರು ಶಾಲೆ, ಕಾಲೇಜು ಮುಗಿಸಿ ಬರುತ್ತಿದ್ದಂತೆ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿಕೊಂಡು ಬಂದು ಕೀಟಲೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಬಸ್ನಿಂದ ಇಳಿದು ಶಾಲೆ, ಕಾಲೇಜಿಗೆ ಬರುವಾಗ ಮತ್ತು ಶಾಲೆ ಕಾಲೇಜು ಮುಗಿಸಿ ಮರಳಿ ಊರಿಗೆ ಹೋಗೋವಾಗ ಬೈಕ್ ಮೇಲೆ ಹುಡುಗಿಯರನ್ನು ಹಿಂಬಾಲಿಸಿ ಬರುವ ಪಡ್ಡೆ ಹುಡುಗರ ಕಾಟಕ್ಕೆ ವಿದ್ಯಾರ್ಥಿನಿಯರು ಮಾತ್ರವಲ್ಲ ಅವರ ಪೋಷಕರಿಗೆ ಮತ್ತು ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪಡ್ಡೆ ಹುಡುಗರ ಈ ಕಾಟ ಹಾವೇರಿ ಜಿಲ್ಲೆ ಸವಣೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಹೆಚ್ಚಾಗಿದೆ. ಪಟ್ಟಣದಲ್ಲಿ ಹಲವಾರು ಶಾಲೆ ಮತ್ತು ಕಾಲೇಜುಗಳಿವೆ. ಇಲ್ಲಿಗೆ ವಿದ್ಯಾರ್ಜನೆಗೆಂದು ಬರುವ ಬಹುತೇಕ ವಿದ್ಯಾರ್ಥಿನಿಯರು ಸಾರಿಗೆ ಬಸ್ಗಳಲ್ಲೇ ಬರುತ್ತಾರೆ. ಆದರೆ ಬಸ್ಗಳಲ್ಲಿ ಬರುವ ವಿದ್ಯಾರ್ಥಿನಿಯರಿಗೆ ಪಡ್ಡೆ ಹುಡುಗರ ಕಾಟ ಶುರುವಾಗಿದೆ.
ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ಬರುವಾಗ ಮತ್ತು ಶಾಲೆ, ಕಾಲೇಜು ಮುಗಿಸಿ ಮನೆಗೆ ವಾಪಸ್ ಹೋಗಲು ಬಸ್ ನಿಲ್ದಾಣಕ್ಕೆ ಬರುವಾಗ ಅವರನ್ನು ಹಿಂಬಾಲಿಸಿಕೊಂಡು ಬಂದು ಕೀಟಲೆ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಅಸಭ್ಯವಾಗಿ ಮಾತನಾಡೋದು, ಅನುಚಿತವಾಗಿ ವರ್ತಿಸೋದು ಮಾಡಲಾಗುತ್ತಿದೆ. ಹೀಗಾಗಿ ಶಾಲೆ, ಕಾಲೇಜಿಗೆ ಬರುವಾಗ ಮತ್ತು ಶಾಲೆ, ಕಾಲೇಜು ಮುಗಿಸಿ ಊರಿಗೆ ವಾಪಸ್ ಬಸ್ ಹತ್ತುವವರೆಗೆ ಆಯಾ ಶಾಲೆ, ಕಾಲೇಜಿನ ಶಿಕ್ಷಕರು ಬಸ್ ನಿಲ್ದಾಣಕ್ಕೆ ಬಂದು ವಿದ್ಯಾರ್ಥಿನಿಯರನ್ನು ಬಸ್ನಲ್ಲಿ ಕೂರಿಸಿ, ಬಸ್ಸು ನಿಲ್ದಾಣದಿಂದ ಬಿಟ್ಟ ಮೇಲೆ ವಾಪಸ್ ಹೋಗುವಂಥಾ ಪರಿಸ್ಥಿತಿ ನಿರ್ಮಾಣ ಆಗಿದೆ. ಪಡ್ಡೆ ಹುಡುಗರ ಕಾಟ ವಿದ್ಯಾರ್ಥಿನಿಯರು ಮಾತ್ರವಲ್ಲ ಶಾಲಾ, ಕಾಲೇಜು ಶಿಕ್ಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಪ್ರತಿದಿನ ಸಾವಿರಾರು ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶಗಳಿಂದ ಪಟ್ಟಣದಲ್ಲಿನ ಶಾಲಾ, ಕಾಲೇಜುಗಳಿಗೆ ಅಕ್ಷರ ಅರಸಿಕೊಂಡು ಬರುತ್ತಿದ್ದಾರೆ. ಒಂದು ರೀತಿಯಲ್ಲಿ ಪುಂಡ ಪೋಕರಿಗಳ ತಾಣದಂತಿರುವ ಸವಣೂರು ಬಸ್ ನಿಲ್ದಾಣ ಬರುತ್ತಿದ್ದಂತೆ ಪಡ್ಡೆ ಹುಡುಗರ ಕಾಟ ಶುರುವಾಗುತ್ತದೆ. ಬೈಕ್ನಲ್ಲಿ ಇಬ್ಬರು, ಮೂವರು ಕುಳಿತು ಬರುವ ಹುಡುಗರು ಹುಡುಗಿಯರ ಹಿಂದೆ, ಮುಂದೆ ಬೈಕ್ನಲ್ಲಿ ಹೋಗಿ ಚುಡಾಯಿಸಲು ಆರಂಭಿಸುತ್ತಾರೆ. ಶಾಲಾ, ಕಾಲೇಜು ಶಿಕ್ಷಕರು ಹಲವಾರು ಬಾರಿ ಹುಡುಗಿಯರನ್ನು ಚುಡಾಯಿಸುವ ಹುಡುಗರಿಗೆ ಎಚ್ಚರಿಕೆ ನೀಡಿದರೂ ಹುಡುಗಿಯರನ್ನು ಚುಡಾಯಿಸುವುದು ಮಾತ್ರ ಇನ್ನೂ ನಿಂತಿಲ್ಲ.
ಕೆಲವು ಶಾಲೆ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬಸ್ ನಿಲ್ದಾಣದಲ್ಲಿ ಪುಂಡ ಪೋಕರಿಗಳಿಂದ ಶಾಲೆ, ಕಾಲೇಜಿಗೆ ಬಂದು ಹೋಗುವ ವಿದ್ಯಾರ್ಥಿನಿಯರಿಗೆ ಸಾಕಷ್ಟು ತೊಂದರೆ ಆಗುತ್ತಿದ್ದು, ಬಸ್ ನಿಲ್ದಾಣದಲ್ಲಿ ಪೊಲೀಸ್ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೂ ಕೆಲವು ಶಾಲೆ, ಕಾಲೇಜುಗಳ ಶಿಕ್ಷಕರು ಪತ್ರ ಬರೆದಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ಭದ್ರತೆ ಇಲ್ಲದಾಗಿದ್ದು, ಪುಂಡ ಪೋಕರಿಗಳ ಕಾಟ ತಪ್ಪುತ್ತಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಕರು ಒತ್ತಾಯಿಸಿದ್ದಾರೆ.