ಕೂಗು ನಿಮ್ಮದು ಧ್ವನಿ ನಮ್ಮದು

ಮೂರೂವರೆ ವರ್ಷಗಳ ನಂತರ ಜೆಡಿಎಸ್‌ ಕಚೇರಿಗೆ ಕಾಲಿಟ್ಟ ಜಿಟಿಡಿ: ಸಿಹಿ ತಿನ್ನಿಸಿದ ಎಚ್‌ಡಿಕೆ

ಬೆಂಗಳೂರು: ಜೆಡಿಎಸ್‌ ಹಿರಿಯ ನಾಯಕ ಜಿಟಿ ದೇವೇಗೌಡ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಮೇಲೆ ಬೇಸರ ಮಾಡಿಕೊಂಡು ಪಕ್ಷದಿಂದ ದೂರವೇ ಉಳಿದಿದ್ದರು. ಆದರೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಜಿಟಿಡಿ ಮನೆಗೆ ಭೇಟಿಕೊಟ್ಟ ನಂತರ ಎಲ್ಲಾ ವೈಮನಸ್ಸೂ ಕೊನೆಗೊಂಡಿದೆ. ಮೂರೂವರೆ ವರ್ಷಗಳ ನಂತರ ಜಿಟಿಡಿ ಇಂದು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿದ್ದಾರೆ. ಅವರನ್ನು ಕುಮಾರಸ್ವಾಮಿ ಬರಮಾಡಿಕೊಂಡು ಸಿಹಿ ತಿನಿಸಿದರು. ಪಕ್ಷ ಬಿಟ್ಟು ಜಿಟಿ ದೇವೇಗೌಡ ಕಾಂಗ್ರೆಸ್‌ ಸೇರುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ದೇವೇಗೌಡರ ಒಂದು ಭೇಟಿ ಎಲ್ಲವನ್ನೂ ಬದಲಿಸಿದೆ. ಮೈಸೂರು ಭಾಗದ ಚುನಾವಣಾ ಉಸ್ತುವಾರಿಯನ್ನೂ ಜಿಟಿಡಿ ಅವರಿಗೇ ನೀಡಲಾಗಿದೆ. ಜತೆಗೆ ಅವರ ಮಗ ಹರೀಶ್‌ ಗೌಡ ಅವರಿಗೂ ಹುಣಸೂರಿನಿಂದ ಈ ಬಾರಿ ಸ್ಪರ್ಧೆಗೆ ಟಿಕೆಟ್‌ ನೀಡಲಾಗಿದ್ದು, ಜಿಟಿಡಿ ಖುಷಿಯಾಗಿದ್ದಾರೆ.

ದೇವೇಗೌಡ ಭೇಟಿ:

ಕಳೆದ ಮೂರು ವರ್ಷಗಳಿಂದ ಜೆಡಿಎಸ್‌ ವರಿಷ್ಠರ ಮೇಲೆ ಮುನಿಸಿಕೊಂಡಿದ್ದ ಜಿ.ಟಿ. ದೇವೇಗೌಡ ಅವರನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಭೇಟಿ ಮಾಡಿದರು. ಭೇಟಿಯಾದ ಮರುಕ್ಷಣವೇ ಭಾವುಕರಾದ ಜಿ.ಟಿ. ದೇವೇಗೌಡ ಕಾಲಿಗೆ ನಮಸ್ಕರಿಸಿ ಕಣ್ಣೀರಿಟ್ಟರು. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಜಿ.ಟಿ. ದೇವೇಗೌಡರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಭಾವುಕರಾದ ಜಿ.ಟಿ. ದೇವೇಗೌಡ ಗೌಡರ ಕಾಲು ಹಿಡಿದು ಬಿಕ್ಕಿ ಬಿಕ್ಕಿ ಅತ್ತರು. ಮೂರು ವರ್ಷಗಳಿಂದ ಭೇಟಿ ಮಾಡದಿದ್ದರೂ, ಮಾಜಿ ಪ್ರಧಾನಿಗಳೇ ಮನೆಗೆ ಭೇಟಿ ನೀಡಿದ್ದರಿಂದ ಅತೀವ ಸಂತಸವಾಗಿದೆ. ನಾನು ಮತ್ತು ನಮ್ಮ ಕುಟುಂಬ ಜೆಡಿಎಸ್‌ ಜೊತೆಗೆ ಎಂದಿಗೂ ಇರಲಿದೆ ಎಂದು ಜಿ.ಟಿ. ದೇವೇಗೌಡ ಹೇಳಿದರು.

ಭೇಟಿಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಜಿ.ಟಿ. ದೇವೇಗೌಡ ಅವರು ಜೆಡಿಎಸ್‌ ಪಕ್ಷದಲ್ಲೇ ಮುಂದುವರೆಯುವುದಾಗಿ ಹೇಳಿದ್ದಾರೆ. “ನಾನು ಕೋವಿಡ್‌ ಬಂದ ದಿನದಿಂದ ದೇವೇಗೌಡರನ್ನು ಭೇಟಿ ಮಾಡಿರಲಿಲ್ಲ. ಅವರಿಗೆ 91 ವರ್ಷ ವಯಸ್ಸು. ಆದರೂ ಅವರು ಇಂದು ನನ್ನನ್ನು ಭೇಟಿ ಮಾಡಲು ನನ್ನ ಮನೆಗೇ ಬಂದಿದ್ದಾರೆ. ಅವರ ಆರೋಗ್ಯ ಕೂಡ ಸರಿಯಿಲ್ಲ. ಅಷ್ಟಾದರೂ ಬಂದು ಭೇಟಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿ. ನಾನು ಮತ್ತು ನನ್ನ ಕುಟುಂಬ ಜೆಡಿಎಸ್‌ ಜೊತೆ ಎಂದಿಗೂ ಇರುತ್ತೇವೆ. ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವತ್ತ ಕೆಲಸ ಮಾಡುತ್ತೇನೆ. ನಾನು ದೂರವಿದ್ದರೂ ದೇವೇಗೌಡರು ನನ್ನನ್ನು ಪ್ರೀತಿಯಿಂದ ನೋಡಿದ್ದಾರೆ. ನಾನು ಕ್ಷಮಿಸಿ ಎಂದು ಕೇಳಿಕೊಂಡಾಗ, ನೀನು ನನ್ನ ಹೆಸರನ್ನು ಉಳಿಸುತ್ತೀಯ ಎಂದಿದ್ದಾರೆ. ಜಿ.ಟಿ. ದೇವೇಗೌಡ ನನ್ನ ಹೆಸರು ಉಳಿಸುತ್ತಾನೆ ಎಂದು ಅವರು ಹಲವಾರು ಬಾರಿ ಹೇಳಿದ್ದಾರೆ,” ಎಂದು ಜಿ.ಟಿ. ದೇವೇಗೌಡ ಹೇಳಿದರು.

ಜೆಡಿಎಸ್‌ ತೊದು ಜಿ.ಟಿ. ದೇವೇಗೌಡ ಕಾಂಗ್ರೆಸ್‌ ಸೇರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಪಕ್ಷದ ಯಾವುದೇ ಸಭೆಯಲ್ಲೂ ಜಿ.ಟಿ. ದೇವೇಗೌಡ ಭಾಗವಹಿಸಿರಲಿಲ್ಲ. ಆದರೆ ಈಗ ದೇವೇಗೌಡರ ಭೇಟಿ ಬೆನ್ನಲ್ಲೇ ಭಿನ್ನಮತ ಶಮನವಾಗಿದೆ. ಮುಂಬರುವ ಚುನಾವಣೆಯಲ್ಲೂ ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದಿಂದಲೇ ಜಿ.ಟಿ. ದೇವೇಗೌಡ ಚುನಾವಣೆಗೆ ನಿಲ್ಲಲಿದ್ದಾರೆ. ಜಿ.ಟಿ.ಡಿ. ಎದುರು ಸೋತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿಯೂ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರ ಎಂಬುದನ್ನು ಕಾದು ನೋಡಬೇಕು.

error: Content is protected !!