ಬೆಂಗಳೂರಿನ ಪೀಣ್ಯ ದಾಸರಹಳ್ಳಿಯ ನೆಲಗದರನಹಳ್ಳಿಯ ಮೂಲದ ಬ್ರಿಟನ್‌ನ ಸ್ವಿಂಡನ್ ನಿವಾಸಿ ರವಿಕುಮಾರ್ ವೆಂಕಟೇಶ್ ಅವರು ಲೇಬರ್ ಪಕ್ಷದಿಂದ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ರವಿ ಅವರಿಗೆ ಸ್ಥಳೀಯರು, ಭಾರತೀಯ ಮೂಲದ ಮತದಾರರು ಹಾಗೂ ಕನ್ನಡಿಗರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಸ್ವಿಂಡನ್ (ಬ್ರಿಟನ್): ಬ್ರಿಟನ್ ದೇಶದ ಸಂಸತ್‌ಗೆ ಮುಂದಿನ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಕನ್ನಡಿಗ ರವಿಕುಮಾರ್ ವೆಂಕಟೇಶ್ ತಯಾರಿ ನಡೆಸಿದ್ದಾರೆ. ಬೆಂಗಳೂರಿನ ಪೀಣ್ಯ ದಾಸರಹಳ್ಳಿಯ ನೆಲಗದರನಹಳ್ಳಿಯ ಮೂಲದ ಬ್ರಿಟನ್‌ನ ಸ್ವಿಂಡನ್ ನಿವಾಸಿ ರವಿಕುಮಾರ್ ವೆಂಕಟೇಶ್ ಅವರು ಲೇಬರ್ ಪಕ್ಷದಿಂದ ಪಾರ್ಲಿಮೆಂಟ್ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಲೇಬರ್ ಪಕ್ಷದಿಂದ ರವಿ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದ್ದು, ನಾರ್ಥ್ ಸ್ವಿಂಡನ್ ಪಾರ್ಲಿಮೆಂಟ್ ಕ್ಷೇತ್ರದಿಂದ ಅಭ್ಯರ್ಥಿಯಾಗಲಿದ್ದಾರೆ. ರವಿ ಅವರಿಗೆ ಸ್ಥಳೀಯರು, ಭಾರತೀಯ ಮೂಲದ ಮತದಾರರು ಹಾಗೂ ಕನ್ನಡಿಗರಿಂದಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ರವಿ ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್. ಸಾಮಾಜಿಕ ಸೇವೆಗಳ ಮೂಲಕ ಸ್ಥಳೀಯವಾಗಿ ಹೆಸರು ಮಾಡಿದ್ದಾರೆ. ಅಲ್ಲದೆ ಸ್ವಿಂಡನ್‌ನ ಸ್ಥಳೀಯ ಆಡಳಿತ ಸಂಸ್ಥೆಗೆ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಬ್ರಿಟನ್ ಸದ್ಯ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಹೊರಬರಲು ಲೇಬರ್ ಪಕ್ಷದ ಸಿದ್ಧಾಂತ, ಆಡಳಿತದ ವಿಧಾನಗಳು ಹೆಚ್ಚು ಸೂಕ್ತ. ಜನರ ಜೀವನ ಸುಧಾರಣೆ ಸದ್ಯದ ದೊಡ್ಡ ಸವಾಲಾಗಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಲೇಬರ್ ಪಕ್ಷವು ಮಾಡಿಕೊಳ್ಳುತ್ತಿದೆ’ ಎಂದು ರವಿ ಕನ್ನಡಪ್ರಭಕ್ಕೆ ಹೇಳಿದ್ದಾರೆ.