ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 62 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಬಿಜೆಪಿಯ ಈ ಪಟ್ಟಿಯಲ್ಲಿ ಐವರು ಮಹಿಳೆಯರೂ ಸೇರಿದ್ದಾರೆ. ಸೋಮವಾರ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಇದರಲ್ಲಿ ಕೆಲ ಹಾಲಿ ಶಾಸಕರ ಟಿಕೆಟ್‌ಗೂ ಕತ್ತರಿ ಬಿದ್ದಿದೆ.
ಸಿರಾಜ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಸಿಎಂ ಜೈರಾಮ್ ಠಾಕೂರ್: ಈ ಬಾರಿಯ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಸಿರಾಜ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹೆಸರು ಘೋಷಣೆಯಾದ ನಂತರ ಸಿಎಂ ಜೈರಾಮ್ ಠಾಕೂರ್ ಅವರು ಇಂದು (ಅಕ್ಟೋಬರ್ 19) ಸಿರಾಜ್ ವಿಧಾನಸಭೆಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಮಂಡಿ ಜಿಲ್ಲೆಯ ಸಿರಾಜ್ ಅಸೆಂಬ್ಲಿ ಸ್ಥಾನವನ್ನು ವಿಐಪಿ ಸ್ಥಾನವೆಂದು ಪರಿಗಣಿಸಲಾಗಿದೆ ಮತ್ತು ರಜಪೂತ ಭ್ರಾತೃತ್ವದ ಪ್ರಭಾವವು ಈ ಕ್ಷೇತ್ರದಲ್ಲಿ ಅತ್ಯಧಿಕವಾಗಿದೆ ಎಂದು ನಂಬಲಾಗಿದೆ. ಗಮನಾರ್ಹವಾಗಿ, ಸಿಎಂ ಜೈರಾಮ್ ಠಾಕೂರ್ ಅವರು ಸಿರಾಜ್ ಕ್ಷೇತ್ರದಿಂದ ಸತತ 5 ಬಾರಿ ಗೆದ್ದಿದ್ದಾರೆ.
ಯಾರು ಎಲ್ಲಿಂದ ಟಿಕೆಟ್ ಪಡೆದರು?
ಮಾಜಿ ಕೇಂದ್ರ ಸಚಿವ ಸುಖ್ ರಾಮ್ ಅವರ ಪುತ್ರ ಅನಿಲ್ ಶರ್ಮಾ ಮಂಡಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಸತ್ಪಾಲ್ ಸಿಂಗ್ ಸತ್ತಿ ಉನಾದಿಂದ ಸ್ಪರ್ಧಿಸಲಿದ್ದಾರೆ. ಪಕ್ಷವು ಚುರಾ ಕ್ಷೇತ್ರದಿಂದ ಹಂಸರಾಜ್, ಭರ್ಮೌರ್ ಕ್ಷೇತ್ರದಿಂದ ಡಾ. ಜನ್ನಕ್ ರಾಜ್, ಚಂಬಾ ಕ್ಷೇತ್ರದಿಂದ ಇಂದಿರಾ ಕಪೂರ್, ಡಾಲ್ಹೌಸಿ ಕ್ಷೇತ್ರದಿಂದ ಡಿಎಸ್ ಠಾಕೂರ್, ಭಟಿಯಲ್ ಕ್ಷೇತ್ರದಿಂದ ವಿಕ್ರಮ್ ಜರಿಯಾಲ್, ನೂರ್ಪುರ್ ಕ್ಷೇತ್ರದಿಂದ ರಣವೀರ್ ಸಿಂಗ್, ಇಂದೋರಾ ಕ್ಷೇತ್ರದಿಂದ ರೀಟಾ ಧಿಮಾನ್, ಫತೇಪುರ್ ಕ್ಷೇತ್ರದಿಂದ ರಾಕೇಶ್ ಪಠಾನಿಯಾ ಅವರನ್ನು ಪಕ್ಷವು ಕಣಕ್ಕಿಳಿಸಿದೆ. ಜ್ವಾಲಿ ಕ್ಷೇತ್ರದಿಂದ ಸಂಜಯ್ ಗುಲೇರಿಯಾ, ಜಸ್ವಾನ್-ಪ್ರಂಗ್‌ಪುರ ಕ್ಷೇತ್ರದಿಂದ ವಿಕ್ರಮ್ ಠಾಕೂರ್, ಜೈಸಿಂಗ್‌ಪುರ ಕ್ಷೇತ್ರದಿಂದ ರವೀಂದರ್ ಧಿಮಾನ್ ಕಣದಲ್ಲಿದ್ದಾರೆ.
ನವೆಂಬರ್ 12 ರಂದು ಹಿಮಾಚಲದಲ್ಲಿ ಮತದಾನ:
ಭಾರತೀಯ ಚುನಾವಣಾ ಆಯೋಗವು (ಇಸಿಐ) ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 ರ ದಿನಾಂಕಗಳನ್ನು ಪ್ರಕಟಿಸಿದೆ ಮತ್ತು ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಹಿಮಾಚಲ ಪ್ರದೇಶದ 68 ಸ್ಥಾನಗಳಿಗೆ ನವೆಂಬರ್ 12 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅಕ್ಟೋಬರ್ 25 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.