ವಿಜಯಪುರ: ವಿಜಯಪುರ ಮಹಾನಗರಪಾಲಿಕೆ ಬಿಜೆಪಿಯ ಮಾಜಿ ಮೇಯರ್ ಮತ್ತು ಮಾಜಿ ಉಪ ಮೇಯರ್ ಟಿಕೆಟ್ ಸಿಗದಿರುವುದಕ್ಕೆ ಅಸಮಾಧಾನಗೊಂಡು ಬಿಜೆಪಿ ತೊರೆದು ಜೆಡಿಎಸ್ ಪಕ್ಷದಿಂದ ಚುನಾವಣೆ ಅಖಾಢಕ್ಕಿಳಿದು, ಬಿಜೆಪಿಗೆ ದೊಡ್ಡ ಶಾಕ್ ನೀಡಿದ್ದಾರೆ.
ವಿಜಯಪುರ ಮಹಾನಗರ ಪಾಲಿಕೆ ಮಾಜಿ ಮೇಯರ್ ಸಂಗೀತಾ ಪೋಳ ಅವರು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗರಾಗಿದ್ದು, ಬಿಜೆಪಿಯಲ್ಲಿಯೇ ತಮ್ಮ ಅಸ್ತಿತ್ವ ಕಂಡುಕೊಂಡು ಎರಡು ಬಾರಿ ಮೇಯರ್ ಆಗಿದ್ದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಆಪ್ತರಲ್ಲಿ ಒಬ್ಬರಾಗಿರುವ ಆನಂದ ಧುಮಾಳೆ ಅವರಿಗೂ ಕೂಡಾ ಟಿಕೆಟ್ ಕೈ ತಪ್ಪಿದೆ.
ಮಾಜಿ ಮೇಯರ್ ಸಂಗೀತಾ ಪೋಳ ಅವರಿಗೆ ಟಿಕೆಟ್ ಸಿಗದ್ದಕ್ಕೆ ಅಸಮಾಧಾನಗೊಂಡು ಪರಿಶಿಷ್ಟಜಾತಿ ಮಹಿಳೆ ಗುಂಪಿಗೆ ಮೀಸಲಾಗಿರುವ ವಾರ್ಡ್ ನ. 33ರಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಂಡಾಯದ ಬಾವುಟ ಹಾರಿಸಿದ್ದಾರೆ.
ಅಲ್ಲದೆ ಹಿಂದುಳಿದ ಬ ವರ್ಗಕ್ಕೆ ಮೀಸಲಾದ 30ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪಾಲಿಕೆಯ ಮಾಜಿ ಉಪ ಮೇಯರ್ ಬಿಜೆಪಿಯ ಆನಂದ ಧುಮಾಳೆ ಅವರು ಸ್ಪರ್ಧಿಸಿದ್ದಾರೆ. ಟಿಕೆಟ್ ಸಿಗದೆ ಈ ಇಬ್ಬರು ಬಿಜೆಪಿಗರು ಜೆಡಿಎಸ್ ಪಕ್ಷದಿಂದ ಚುನಾವಣೆ ಕಣಕ್ಕಿಳಿದು ಬಿಜೆಪಿಗೆ ಆಘಾತ ನೀಡಿದ್ದಾರೆ. ಬರುವ ಚುನಾವಣೆಯಲ್ಲಿ ಬಂಡಾಯ ಯಾವ ರೀತಿ ತಿರುವು ಪಡೆಯುತ್ತಿದೆ ಎಂಬುವುದು ತೀವ್ರ ಕುತೂಹಲ ಮೂಡಿಸಿದೆ.