ಹೊಸ ಜೂಕ್, ಕಶ್ಕೈ ಮತ್ತು ಎಕ್ಸ್-ಟ್ರಯಲ್ ಎಸ್ ಯುವಿಗಳ ಬಿಡುಗಡೆಗಾಗಿ ನಿಸ್ಸಾನ್ ಕಂಪನಿಯು ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಆರಂಭಿಸಿದ್ದು, ಅನಾವರಣಗೊಳಿಸಿದ ಹೊಸ ಕಾರುಗಳಲ್ಲಿ ಮೊದಲ ಹಂತದಲ್ಲಿ ಎಕ್ಸ್-ಟ್ರಯಲ್ ಬಿಡುಗಡೆಯಾಗಲಿದ್ದರೆ ತದನಂತರ ಜೂಕ್, ಕಶ್ಕೈ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.
ಭಾರತದಲ್ಲಿ ತನ್ನ ಜಾಗತಿಕ ಕಾರು ಉತ್ಪನ್ನಗಳ ಸರಣಿಯನ್ನು ಪರಿಚಯಿಸಲು ಯೋಜನೆ ರೂಪಿಸುತ್ತಿರುವ ನಿಸ್ಸಾನ್ ಕಂಪನಿಯು ಹೊಸ ಕಾರುಗಳನ್ನು ಪೆಟ್ರೋಲ್ ಜೊತೆ ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿವೆ. ಎಂಜಿನ್ ಮತ್ತು ಪರ್ಫಾಮೆನ್ಸ್
ಭಾರತದಲ್ಲಿ ಮೊದಲ ಹಂತದಲ್ಲಿ ಬಿಡುಗಡೆಯಾಗಲಿರುವ ಹೊಸ ಎಕ್ಸ್-ಟ್ರಯಲ್ ಎಸ್ ಯುವಿ ಕಾರು ಪೆಟ್ರೋಲ್ ಮತ್ತು ಹೈಬ್ರಿಡ್ ಮಾದರಿಗಳಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರಿನಲ್ಲಿ ಕಂಪನಿಯು ಮೈಲ್ಡ್ ಹೈಬ್ರಿಡ್ ಹೊಂದಿರುವ 1.5 ಲೀಟರ್ ಪೆಟ್ರೋಲ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ ಎಂಜಿನ್ ಆಯ್ಕೆ ನೀಡಲಾಗಿದೆ.
ಎಕ್ಸ್-ಟ್ರಯಲ್ ಎಸ್ ಯುವಿಯಲ್ಲಿರುವ ಮೈಲ್ಡ್ ಹೈಬ್ರಿಡ್ ಹೊಂದಿರುವ ಪೆಟ್ರೋಲ್ ಮಾದರಿಯು ಸಿವಿಟಿ ಗೇರ್ ಬಾಕ್ಸ್ ನೊಂದಿಗೆ 160 ಬಿಎಚ್ ಪಿ, 300 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದರೆ ಸ್ಟ್ರಾಂಗ್ ಹೈಬ್ರಿಡ್ ಮಾದರಿಯು ಗರಿಷ್ಠ 210 ಬಿಎಚ್ ಪಿ ಮತ್ತು 330 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಎಕ್ಸ್-ಟ್ರಯಲ್ ಕಾರು 2 ವ್ಹೀಲ್ ಡ್ರೈವ್ ಮತ್ತು 4 ವ್ಹೀಲ್ ಡ್ರೈವ್ ಆಯ್ಕೆ ಹೊಂದಿರಲಿದ್ದು, ಫ್ರಂಟ್ ವ್ಹೀಲ್ ಡ್ರೈವ್ ಮಾದರಿಯು ಸಿಂಗಲ್ ಮೋಟಾರ್ ಹೊಂದಿರಲಿದ್ದರೆ ಆಲ್ ವ್ಹೀಲ್ ಡ್ರೈವ್ ಮಾದರಿಯು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಹೊಂದಿರಲಿದೆ.
ಹಾಗೆಯೇ ಕಶ್ಕೈ ಎಸ್ ಯುವಿ ಕಾರು 1.3 ಲೀಟರ್ ಇ-ಪವರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ನೊಂದಿಗೆ 187 ಬಿಎಚ್ ಪಿ ಮತ್ತು 330 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಪ್ರಮುಖ ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ. ಇನ್ನು ಜೂಕ್ ಕ್ರಾಸ್ ಓವರ್ ಎಸ್ ಯುವಿ ಮಾದರಿಯು ಭಾರತದಲ್ಲಿ ಕಂಪ್ಯಾಕ್ಟ್ ಎಸ್ ಯುವಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಹೊಸ ಕಾರು 1.6 ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಈ ಮೂಲಕ ಹೊಸ ಕಾರುಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ನಿಸ್ಸಾನ್ ಇಂಡಿಯಾ ಕಂಪನಿಯು 2023ರಲ್ಲಿ ಮೊದಲ ಕಾರು ಬಿಡುಗಡೆ ಮಾಡಲಿದ್ದು, ತದನಂತರ ಮುಂದಿನ ಎರಡು ವರ್ಷಗಳಲ್ಲಿ ಮೂರು ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ