ಬೆಳಗಾವಿ: ಜಿಲ್ಲೆಯ ಬಿಜೆಪಿ ಘಟಕದಲ್ಲಿನ ಭಿನ್ನಮತ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬಂದಷ್ಟೂ ಕಗ್ಗಂಟಾಗುತ್ತಿದೆ. ಇದು ಪಕ್ಷದ ರಾಜ್ಯ ಮುಖಂಡರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ. ಭಿನ್ನಮತ ಶಮನಕ್ಕಾಗಿ ಭಾನುವಾರ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮಣ ಸವದಿ ಅವರ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು ಕುತೂಹಲ ಕೆರಳಿಸಿದೆ.
‘ಬೆಳಗಾವಿ ಬಿಜೆಪಿಯಲ್ಲಿ ಭಿನ್ನಮತವಿಲ್ಲ’ ಎಂದು ಬಿಜೆಪಿ ವರಿಷ್ಠರು ಸಾರ್ವಜನಿಕವಾಗಿ ಹೇಳುತ್ತ ಬಂದಿದ್ದರೂ ಪಕ್ಷದ ಕಾರ್ಯಕ್ರಮಗಳ ಸಂದರ್ಭದಲ್ಲಿ ಭಿನ್ನಮತ ಸ್ಪಷ್ಟವಾಗಿ ಗೋಚರಿಸುತ್ತಲೇ ಇದೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಅವರು ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯರ್ತರ ಸಮಾವೇಶದ ವೇದಿಕೆಯಲ್ಲೂ ಜಾರಕಿಹೊಳಿ ಸಹೋದರರು ಕಾಣಿಸಿಕೊಂಡಿರಲಿಲ್ಲ. ಇನ್ನು, ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅರುಣ ಸಿಂಗ್ ಅವರು, ‘ನಮ್ಮಲ್ಲಿ ಮತಭೇದವಿದೆಯೇ ಹೊರತು ಮನಭೇದವಿಲ್ಲ’ ಎನ್ನುವ ಮೂಲಕ ಭಿನ್ನಮತ ಇರುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಬಿಜೆಪಿ ವರಿಷ್ಠರು ಈ ಎರಡೂ ಬಣಗಳ ನಡುವೆ ತೇಪೆ ಹಚ್ಚಲು ಸತತ ಪ್ರಯತ್ನ ಮಾಡುತ್ತೇ ಇದ್ದಾರೆ. ಸದ್ಯ ಚುನಾವಣೆ ಹತ್ತಿರ ಬಂದರೂ ಬಣಗಳ ನಡುವಿನ ಬಿರುಕು ಮುಚ್ಚದಿರುವುದು ವರಿಷ್ಠರಿಗೆ ತಲೆನೋವು ತಂದಿದೆ.
ಬಣದ ಬೇಡಿಕೆ ಮಂಡನೆ:
ಭಾನುವಾರ ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು ಕುತೂಹಲ ಹುಟ್ಟಿಸಿದೆ. ಇಬ್ಬರೂ ತಮ್ಮ ಬಣದ ಬೇಡಿಕೆಗಳನ್ನು ಮಂಡಿಸಿದ್ದು, ಮುಖಂಡರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಅರುಣ ಸಿಂಗ್ ನೀಡಿದ್ದಾರೆ ಎನ್ನಲಾಗಿದೆ.