ಕೂಗು ನಿಮ್ಮದು ಧ್ವನಿ ನಮ್ಮದು

ಭಾರತದಲ್ಲಿ ಬಡವರ ಸಂಖ್ಯೆ 41 ಕೋಟಿ ಇಳಿಕೆ!

ವಿಶ್ವಸಂಸ್ಥೆ: ಹೆಚ್ಚುಕಮ್ಮಿ ಕಳೆದ 15 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 41.5 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಇದೊಂದು ಐತಿಹಾಸಿಕ ಬದಲಾವಣೆ. 2005ರಿಂದ 2021ರ ನಡುವೆ ಭಾರತದಲ್ಲಿ ಬಡತನ ನಿರ್ಮೂಲನೆ ಕಾರ್ಯ ಅದ್ಭುತವಾಗಿ ನಡೆದಿದೆ ಎಂದು ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ ಹಾಗೂ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಬಡತನ ಮತ್ತು ಮಾನವಾಭಿವೃದ್ಧಿ ಯೋಜನೆಗಳು ಜಂಟಿಯಾಗಿ ಹೊಸ ಬಹುದೃಷ್ಟಿಕೋನಗಳ ಬಡತನ ಸೂಚ್ಯಂಕವನ್ನು ಬಿಡುಗಡೆ ಮಾಡಿವೆ. ಅದರಲ್ಲಿ ಭಾರತದಲ್ಲಿ 41.5 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದು, 2030ರೊಳಗೆ ಇನ್ನುಳಿದ ಬಡವರಲ್ಲಿ ಶೇ.50ರಷ್ಟು ಮಂದಿಯನ್ನು ಬಡತನದಿಂದ ಮೇಲೆತ್ತಲು ಸಾಧ್ಯವಿದೆ ಎಂದು ಹೇಳಲಾಗಿದೆ.

ಸುಸ್ಥಿರ ಅಭಿವೃದ್ಧಿ ಗುರಿಗಳ ಅಧ್ಯಯನಕ್ಕೆ ಭಾರತ ಬಹಳ ಮುಖ್ಯ ದೇಶವಾಗಿದೆ. 2030ಕ್ಕೆ ಎಲ್ಲರನ್ನೂ ಬಡತನದಿಂದ ಮೇಲೆತ್ತಲು ಭಾರತ ಗುರಿ ನಿಗದಿಪಡಿಸಿಕೊಂಡಿದೆ. ಸರಿಯಾದ ದಿಕ್ಕಿನಲ್ಲಿ ಪ್ರಯತ್ನಗಳು ಸಾಗಿದರೆ ಕನಿಷ್ಠ ಶೇ. 50 ರಷ್ಟಾದರೂ ಬಡವರನ್ನು ಬಡತನದಿಂದ ಹೊರಗೆ ತರಲು ಸಾಧ್ಯವಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

23 ಕೋಟಿ ಬಡವರು:
ವಿಶ್ವಸಂಸ್ಥೆ ಹಾಗೂ ಆಕ್ಸ್‌ಫರ್ಡ್‌ ವಿವಿ ತಯಾರಿಸಿರುವ ಈ ವರದಿ 2020ರ ಜನಸಂಖ್ಯೆಯನ್ನು ಆಧರಿಸಿದೆ. ಈ ಸಮಯದಲ್ಲಿ ಭಾರತದಲ್ಲಿ ಸುಮಾರು 23 ಕೋಟಿ ಬಡವರು (ಒಟ್ಟು ಜನಸಂಖ್ಯೆಯ ಶೇ.16.4) ಉಳಿದಿದ್ದಾರೆ. ಹೀಗಾಗಿ ಈಗಲೂ ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಬಡವರನ್ನು ಹೊಂದಿರುವ ದೇಶವಾಗಿದೆ. ನಂತರದ ಸ್ಥಾನದಲ್ಲಿ 9.6 ಕೋಟಿ ಬಡವರೊಂದಿಗೆ ನೈಜೀರಿಯಾ ಇದೆ.

ಸಾಕಷ್ಟು ಬದಲಾವಣೆಯ ನಂತರವೂ ಭಾರತದಲ್ಲಿ ಕೋವಿಡ್‌ನಿಂದಾಗಿ 2020ರ ನಂತರ ಇನ್ನಷ್ಟು ಜನರು ಬಡತನಕ್ಕೆ ಜಾರಿರುವ ಸಾಧ್ಯತೆಯಿದೆ. ಬೆಲೆಗಳ ಏರಿಕೆ, ಇಂಧನ ದುಬಾರಿ ಹಾಗೂ ಅಪೌಷ್ಟಿಕತೆಯಿಂದಾಗಿ ಭಾರತದಲ್ಲೀಗ ಬಡವರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿರಬಹುದು. ಸಮಗ್ರ ನೀತಿ ಹಾಗೂ ಸರಿಯಾದ ಪ್ರಯತ್ನಗಳ ಮೂಲಕ ಬಡತನ ನಿರ್ಮೂಲನೆ ಸಾಧ್ಯವಿದೆ ಎಂದೂ ವರದಿ ಹೇಳಿದೆ.

ಯಾವ ರಾಜ್ಯದಲ್ಲಿ ಬಡವರು ಹೆಚ್ಚು:
ಭಾರತದಲ್ಲಿ ಅತಿಹೆಚ್ಚು ಬಡವರು ಬಿಹಾರದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಜಾರ್ಖಂಡ್, ಮೇಘಾಲಯ, ಮಧ್ಯಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ, ಒಡಿಶಾ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ರಾಜ್ಯಗಳಿವೆ.

111 ದೇಶಗಳಲ್ಲಿ 120 ಕೋಟಿ ಬಡವರು
ವಿಶ್ವಸಂಸ್ಥೆಯು 111 ದೇಶಗಳ ಬಡತನದ ಬಗ್ಗೆ ಅಧ್ಯಯನ ನಡೆಸಿದೆ. ಅದರ ಪ್ರಕಾರ ಈ ದೇಶಗಳಲ್ಲಿ ಒಟ್ಟು 120 ಕೋಟಿ ಬಡವರಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.19 ರಷ್ಟು ಬಡವರು. ಇವರಲ್ಲಿ ಅರ್ಧದಷ್ಟು ಜನರು 18 ವರ್ಷಕ್ಕಿಂತ ಕೆಳಗಿನ ಮಕ್ಕಳು.

error: Content is protected !!