ಕೂಗು ನಿಮ್ಮದು ಧ್ವನಿ ನಮ್ಮದು

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ; ಎಲ್ಲಿ, ಹೇಗೆ ನಡೆಯುತ್ತೆ ಎಲೆಕ್ಷನ್

ನವದೆಹಲಿ: ಬರೋಬ್ಬರಿ 22 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಾಗಿದ್ದು, ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಇಂದು (ಅಕ್ಟೋಬರ್ 17) ಮತದಾನ ನಡೆಯಲಿದ್ದು, ಅಕ್ಟೋಬರ್ 19ರಂದು ಫಲಿತಾಂಶ ಪ್ರಕಟವಾಗಲಿದೆ. ಅಧ್ಯಕ್ಷೀಯ ಚುನಾವಣೆ ಅಖಾಡದ ಕಣದಲ್ಲಿ ಕೇರಳದ ತಿರುವನಂತಪುರಂ ಸಂಸದ ಶಶಿ ತರೂರ್ ಮತ್ತು ಕರ್ನಾಟಕ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಎರಡು ದಶಕಗಳ ನಂತರ ಗಾಂಧಿ ಕುಟುಂಬದೇತರ ಅಧ್ಯಕ್ಷ ಯಾರಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

22 ವರ್ಷಗಳ ನಂತರ ಚುನಾವಣೆ:

ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಗೆ 2000ರಲ್ಲಿ ಸ್ಪರ್ಧೆ ನಡೆದಿತ್ತು. ಅದಾದ ನಂತರ ಅವಿರೋಧ ಆಯ್ಕೆಗಳೇ ನಡೆದುಕೊಂಡು ಬಂದಿವೆ. 2000ರಲ್ಲಿ ಸೋನಿಯಾ ಗಾಂಧಿ ಹಾಗೂ ಉತ್ತರ ಪ್ರದೇಶದ ಹಿರಿಯ ನಾಯಕ ಜಿತೇಂದ್ರ ಪ್ರಸಾದ್ ಸ್ಪರ್ಧಿಸಿದ್ದರು. ಅರ್ಹ 7,542 ಮತಗಳ ಪೈಕಿ ಜಿತೇಂದ್ರ ಪ್ರಸಾದ್ ಕೇವಲ 94 ಮತ ಪಡೆದರೆ ಸೋನಿಯಾ ಗಾಂಧಿ 7,448 ಮತ (ಶೇ.98.75ರಷ್ಟು) ಪಡೆದು ಗೆಲ್ಲುವ ಮೂಲಕ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅವಿರೋಧವಾಗಿಯೇ ಅಧ್ಯಕ್ಷರಾಗುತ್ತಿದ್ದರು. ಆದ್ರೆ, ಇದೀಗ ಪಕ್ಷದಲ್ಲಿ ಸ್ಫೋಟಗೊಂಡಿರುವ ಅಸಮಾಧಾನದಿಂದ ಈಗ 22 ವರ್ಷ ಬಳಿಕ ಮತ್ತೆ ಈಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಾಗಿದೆ.

ಹೇಗಿರುತ್ತೆ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ?

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಗಮನಿಸುತ್ತಾ ಸಾಗಿದರೆ, ಕಾಂಗ್ರೆಸ್‌ ಸಂವಿಧಾನದ 18ನೇ ವಿಧಿ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಈ ಪ್ರಕ್ರಿಯೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಆಯ್ಕೆಯಾದ ವಿವಿಧ ಸದಸ್ಯರು ಈ ಚುನಾವಣೆಯಲ್ಲಿ ಮತ ಹಾಕುತ್ತಾರೆ. ಅದರ ಜೊತೆಗೆ ಎಐಸಿಸಿ ಸದಸ್ಯರು, ವರ್ಷಕ್ಕೂ ಹೆಚ್ಚು ಕಾಲ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಪಕ್ಷದ ಸದಸ್ಯರಾಗಿ ಮುಂದುವರಿದವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಸುಮಾರು 9,100 ಮತದಾನದ ಹಕ್ಕು ಹೊಂದಿದ್ದು, ಇವರೆಲ್ಲಾ ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಕಾಂಗ್ರೆಸ್ ಸಮಿತಿಗಳನ್ನು ಹೊಂದಿರುವ 28 ರಾಜ್ಯಗಳು ಮತ್ತು ಒಂಬತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಪ್ರತಿನಿಧಿಗಳಿಗೆ QR ಕೋಡ್ ಆಧಾರಿತ ಗುರುತಿನ ಕಾರ್ಡ್‌ಗಳನ್ನು ಸಹ ನೀಡಲಾಗಿದ್ದು, ಮತದಾನದ ಹಕ್ಕು ಹೊಂದಿರುವವರು ಬ್ಯಾಲೆಟ್ ಪೇಪರ್​ನಲ್ಲಿ ಮತದಾನ ಚಲಾವಣೆ ಮಾಡಬೇಕು. ಒಂದು ಮತಕ್ಕೆ ಒಂದೇ ಮೌಲ್ಯ ಇದ್ದು, ಅತಿಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿಯು ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.

ಎಲ್ಲೆಲ್ಲಿ ನಡೆಯುತ್ತೆ ಚುನಾವಣೆ?

ಪ್ರತಿ ಆಯಾ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮುಖ್ಯ ಕಚೇರಿಯಲ್ಲಿ ಚುನಾವಣೆ ನಡೆಯಲಿದ್ದು, 200 ಮತಗಳಿಗೆ ಒಂದು ಮತಗಟ್ಟೆಯಂತೆ ಒಟ್ಟು 67 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಗುಪ್ತ ಮತದಾನ ನಡೆಯಲಿದ್ದು, ಬಳಿಕ ಕೇಂದ್ರಗಳಿಂದ ಮತಪೆಟ್ಟಿಗೆಗಳನ್ನು ದೆಹಲಿಯ ಸ್ಟ್ರಾಂಗ್ ರೂಂಗೆ ರವಾನೆ ಮಾಡಲಾಗುತ್ತದೆ. ಅ.19ರಂದು ಮತ ಎಣಿಕೆಯೂ ದೆಹಲಿಯ ಕಾಂಗ್ರೆಸ್‌ನ ಪ್ರಧಾನ ಕಚೇರಿಯಲ್ಲಿ ನಡೆಯುತ್ತದೆ.

ಕೆಪಿಸಿಸಿ ಕಚೇರಿಯಲ್ಲಿ ಮತದಾನ ಕೇಂದ್ರ

ಅಧ್ಯಕ್ಷರ ಆಯ್ಕೆಗೆ ಇಂದು (ಅ.17) ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಎರಡು ಮತದಾನ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಕೆಪಿಸಿಸಿ ಕಚೇರಿ ಹಾಗು ಸಂಗನಕಲ್ಲು ಕ್ಯಾಂಪ್’ನಲ್ಲಿ ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ 494 ಸದಸ್ಯರು ಮತದಾನ ಮಾಡಲಿದ್ದಾರೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ ಕೆ ಹರಿಪ್ರಸಾದ್, ಕೆ ಎಚ್ ಮುನಿಯಪ್ಪ, ಎಂ ಬಿ ಪಾಟೀಲ್ ಸೇರಿದಂತೆ ಇತರರು ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲಾಗಿದ್ದಾರೆ. ಬಳಿಕ ಕರ್ನಾಟಕದ ಎರಡೂ ಮತದಾನ ಕೇಂದ್ರಗಳಿಂದ ದೆಹಲಿಯ ಸ್ಟ್ರಾಂಗ್ ರೂಂಗೆ ಮತ ಪೆಟ್ಟಿಗೆಗಳ ರವಾನೆ ಮಾಡಲಾಗುತ್ತದೆ. ಅ. 19 ರಂದು ಎಐಸಿಸಿ ಕಚೇರಿಯಲ್ಲಿಮತ ಏಣಿಕೆ ನಡೆಯಲಿದೆ.

error: Content is protected !!