ಕೊರೋನಾ ನಿಯಂತ್ರಣಕ್ಕೆ ಬಂದು, ಜನರು ಮೂರನೇ ಡೋಸ್ ಪಡೆಯಲು ನಿರಾಸಕ್ತಿ ತೋರುತ್ತಿರುವ ಬೆನ್ನಲ್ಲೇ ಸದ್ಯದ ಮಟ್ಟಿಗೆ ಲಸಿಕೆ ಖರೀದಿ ಮಾಡದಿರಲು ಕೇಂದ್ರ ಆರೋಗ್ಯ ಸಚಿವಾಲಯ ನಿರ್ಧರಿಸಿದೆ. ಜೊತೆಗೆ 2022-23ನೇ ಸಾಲಿನಲ್ಲಿ ಲಸಿಕೆ ಖರೀದಿಗೆಂದು ಪಡೆದಿದ್ದ 4,237 ಕೋಟಿ ರೂ. ಗಳನ್ನು ಹಣಕಾಸು ಸಚಿವಾಲಯಕ್ಕೆ ಮರಳಿಸಲು ನಿರ್ಧರಿಸಿದೆ. 2022-23ನೇ ಬಜೆಟ್‌ನಲ್ಲಿ (Budget) ಸರ್ಕಾರ 5000 ಕೋಟಿ ರೂ. ಗಳನ್ನು ತೆಗೆದಿರಿಸಿತ್ತು. ಆದರೆ ಇದರಲ್ಲಿ ಇನ್ನೂ 4,237.14 ಕೋಟಿ ರೂ. ಹಣ ಖರ್ಚಾಗದೇ ಬಾಕಿ ಉಳಿದಿದೆ.
ಸ್ಥಗಿತ ಏಕೆ?:
ಕೇಂದ್ರ ಹಾಗೂ ಸರ್ಕಾರಗಳ ಬಳಿ ಈಗ ಇನ್ನೂ 1.8 ಕೋಟಿ ಡೋಸ್ ಲಸಿಕೆಗಳು ಬಾಕಿ ಇವೆ. ಇಷ್ಟು ಡೋಸ್‌ಗಳನ್ನು ಇನ್ನೂ 6 ತಿಂಗಳ ಲಸಿಕಾಕರಣಕ್ಕೆ ಬಳಸಬಹುದು. ಇದೇ ವೇಳೆ, ಕೋವಿಡ್ ಪ್ರಕರಣ ಇಳಿಕೆ ಆಗುತ್ತಿರುವ ಕಾರಣ ಲಸಿಕೆ ಪಡೆಯಲು ಜನರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಬಾಕಿ ಹಣವನ್ನು ಮರಳಿಸಿ, ಲಸಿಕೆ ಖರೀದಿ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.
ಇದೇ ವೇಳೆ, ಖಾಸಗಿಯವರಿಗೂ ಲಸಿಕೆ ನೀಡಲು ಅವಕಾಶ ನೀಡಲಾಗಿರುವ ಕಾರಣ ಒಂದು ವೇಳೆ ಸರ್ಕಾರದ ದಾಸ್ತಾನು ಖಾಲಿ ಆದರೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯ ಇರುತ್ತದೆ ಎಂದು ಅವು ಸ್ಪಷ್ಟಪಡಿಸಿವೆ. ‘ಸದ್ಯಕ್ಕಂತೂ ಸರ್ಕಾರ ಲಸಿಕೆ ಖರೀದಿಸುವುದಿಲ್ಲ. ಇನ್ನು 6 ತಿಂಗಳಲ್ಲಿ ಮತ್ತೆ ಲಸಿಕೆ ಖರೀದಿಸಬೇಕು ಎಂದರೆ ಕೊರೋನಾ ಪರಿಸ್ಥಿತಿಯನ್ನು ಆಧರಿಸಿರುತ್ತದೆ’ ಎಂದು ಮೂಲಗಳು ಹೇಳಿವೆ.
ಈವರೆಗೆ ದೇಶದಲ್ಲಿ ಎಷ್ಟು ಜನರಿಗೆ ಲಸಿಕೆ ವಿತರಣೆ?
2021ರ ಜನವರಿ 16ರಿಂದ ದೇಶದಲ್ಲಿ ಉಚಿತ ಲಸಿಕಾಕರಣವನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ದೇಶದ 18 ವರ್ಷ ಮೇಲ್ಪಟ್ಟ ಶೇ. 92 ಜನರು ಎರಡೂ ಡೋಸ್, ಶೇ. 98 ಜನರು ಮೊದಲ ಡೋಸ್ ಪಡೆದಿದ್ದಾರೆ. ಶೇ. 27 ಜನರು ಮೂರನೇ ಡೋಸ್ ಪಡೆದುಕೊಂಡಿದ್ದಾರೆ. 12 ರಿಂದ 14 ವರ್ಷದ ಶೇ. 87 ಜನರು ಮೊದಲ ಹಾಗೂ ಶೇ. 68 ಜನರು ಎರಡೂ ಡೋಸ್ ಪಡೆದಿದ್ದಾರೆ. ಈವರೆಗೆ ಒಟ್ಟು 219.32 ಕೋಟಿ ಡೋಸ್ ಲಸಿಕೆ ವಿತರಣೆಯಾಗಿದೆ.
2401 ಹೊಸ ಕೋವಿಡ್ ಕೇಸು, 21 ಜನರ ಸಾವು
ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳಲ್ಲಿ ದೇಶದಲ್ಲಿ 2,401 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, 21 ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 26,625ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೆ 4.46 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೈನಂದಿನ ಪಾಸಿಟಿವಿಟಿ ದರ ಶೇ.1.04 ರಷ್ಟಿದೆ. ಈವರೆಗೆ ಒಟ್ಟು 219.32 ಕೋಟಿ ಡೋಸ್ ಲಸಿಕೆ ವಿತರಣೆಯಾಗಿದೆ.