ರಾಯಚೂರು: ಜಿಲ್ಲೆ ಜನರು ಸಂಸದರು, ಶಾಸಕರ ಮೇಲೆ ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ, ಯಾವುದೇ ಕಾರಣಕ್ಕೂ ಜಿಲ್ಲೆಗೆ ಏಮ್ಸ್ ಮಂಜೂರು ಮಾಡಿಸಲೇ ಬೇಕು ಇಲ್ಲವಾದಲ್ಲಿ ನಾವು ಚುನಾವಣೆಯಲ್ಲಿ ಸ್ಪರ್ಧಿಸುವುದೇ ಇಲ್ಲ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಬೆದರಿಕೆ ಹಾಕಿದರು. ಅರಕೇರಾದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು, ಏಮ್ಸ್ ಸ್ಥಾಪನೆಯಾದರೆ ಈ ಭಾಗದ ಬಡ ಜನರಿಗೆ ಅನುಕೂಲವಾಗಲಿದೆ. ಬೇರೆ ಕಡೆ ಹೋಗುವ ತಾಪತ್ರಯ ತಪ್ಪಲಿದೆ. ಕೇಂದ್ರದ ಮನವೊಲಿಸಿ ಜಿಲ್ಲೆಗೆ ಏಮ್ಸ್ ಕೊಡಬೇಕು. ಏಮ್ಸ್ ಕೊಡದಿದ್ದರೆ ಚುನಾವಣೆಗೆ ನಿಲ್ಲುವುದಿಲ್ಲ ಎಂದರು.
ತಾವುಗಳು ಜಿಲ್ಲೆಗೆ ಏಮ್ಸ್ ನೀಡಿದ್ದೇ ಆದಲ್ಲಿ ತಮ್ಮ ಹಾಗೂ ಸಿಎಂ ಬೊಮ್ಮಾಯಿ ಅವರ ಪಂಚಲೋಹದ ಪ್ರತಿಮೆ ಮಾಡಿಸುತ್ತೇವೆ. ನಿಮ್ಮ ಕಾಲಿಗೆ ಬೀಳು ಅಂದ್ರೆ ಸಾಷ್ಟಾಂಗ ಮಾಡುತ್ತೇನೆ. ದಯವಿಟ್ಟು ಕೇಂದ್ರದ ಮೇಲೆ ಒತ್ತಡ ಹಾಕಿ ಹೇಗಾದರೂ ಮಾಡಿ ಜಿಲ್ಲೆಗೆ ಏಮ್ಸ್ ಕೊಡಿಸುವಂತೆ ಕೋರಿದರು. ಅರಕೇರಾ ತಾಲೂಕು ರಚನೆಯಲ್ಲಿ ಸಚಿವ ಆರ್.ಅಶೋಕ ಪಾತ್ರ ಮಹತ್ವದ್ದಾಗಿದೆ. ಹೊಸ ತಾಲೂಕು ರಚನೆಯಲ್ಲಿ ರಾಜಕೀಯ ದುರುದ್ದೇಶವಿಲ್ಲ. ಗಬ್ಬೂರನ್ನು ತಾಲೂಕು ಕೇಂದ್ರ ಮಾಡಬೇಕು ಎಂದರೆ ಅದನ್ನು ಮಾಡೋಣ. ಹೊಸ ತಾಲೂಕು ರಚನೆಯಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಕೃಷ್ಣಾ ನದಿ ದಂಡೆಯ ಗೂಗಲ್ನಿಂದ ತಿಂಥಿಣಿ ಬ್ರಿಡ್ಜ್ವರೆಗೆ ಜಮೀನುಗಳಿಗೆ ನೀರು ಒದಗಿಸಲು 300 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 86 ಕೋಟಿ ರೂ. ವೆಚ್ಚದಲ್ಲಿ ದೇವದುರ್ಗದಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭ ಮಾಡಲಾಗುತ್ತಿದೆ. 350 ತಾಂಡಾ, ದೊಡ್ಡಿಗಳಲ್ಲಿ 175 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಸರ್ವೆ ಮಾಡಲಾಗಿದೆ. ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವ ನಿಟ್ಟಿನಲ್ಲಿ ಸಚಿವ ಆರ್.ಅಶೋಕ ಸಚಿವ ಸಂಪುಟ ಸಭೆಯಲ್ಲಿ ಧ್ವನಿ ಎತ್ತುವ ಮೂಲಕ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಲು ಮುಂದಾಗಬೇಕು ಎಂದುರು.
ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಗ್ರಾಮ ವಾಸ್ತವ್ಯದ ಮೂಲಕ ಜನ ಸಾಮಾನ್ಯರ ಕಷ್ಟಸುಖ ಹಂಚಿಕೊಳ್ಳುವ ಮತ್ತು ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವ ಕೆಲಸವನ್ನು ಸಚಿವ ಆರ್.ಅಶೋಕ ಮಾಡುತ್ತಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಕೇಂದ್ರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಬೇರೆ ಪಕ್ಷಗಳ ಸರ್ಕಾರವಿದ್ದಲ್ಲಿ ಕೇಂದ್ರದ ಯೋಜನೆಗಳ ಫಲ ಜನರಿಗೆ ದೊರೆಯುತ್ತಿಲ್ಲ. ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರ 3,800 ಕೋಟಿ ರೂ. ಅನುದಾನ ನೀಡಿದ್ದು, 2,300 ಕೋಟಿ ರೂ. ವೆಚ್ಚದಲ್ಲಿ ಜಲಧಾರೆ ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ್,ಸುರುಪುರ ಶಾಸಕ ರಾಜೂಗೌಡ ಮಾತನಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್, ರಾಯಚೂರು ಎಪಿಎಂಸಿ ಅಧ್ಯಕ್ಷ ಡಿ.ಅಚ್ಯುತರೆಡ್ಡಿ, ದೇವದುರ್ಗ ಎಪಿಎಂಸಿ ಅಧ್ಯಕ್ಷ ಪ್ರಕಾಶ ಪಾಟೀಲ್, ಗ್ರಾ.ಪಂ. ಅಧ್ಯಕ್ಷ ಭಗಮ್ಮ, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ಬಿ.ನಿಖಿಲ್, ಜಿ.ಪಂ. ಸಿಇಒ ಶಶಿಧರ ಕುರೇರ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರಗೇಶ, ಸಹಾಯಕ ಆಯುಕ್ತರಾದ ರಜನಿಕಾಂತ್ ಚೌಹಾಣ್, ರಾಹುಲ್ ಸಂಕನೂರು ಉಪಸ್ಥಿತರಿದ್ದರು.