ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ವೈರಸ್ ಮೂವರಲ್ಲಿ ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯ ಜನತೆ ಸ್ವಯಂ ಪ್ರೇರಿತರಾಗಿ ತಮ್ಮ ಗ್ರಾಮಗಳಿಗೆ ಯಾರೂ ಪ್ರವೇಶಿಸದಂತೆ ರಸ್ತೆ ಬ್ಲಾಕ್ ಮಾಡುತ್ತಿದ್ದಾರೆ. ಕೊರೋನಾ ಹರಡುವ ಭೀತಿಯಿಂದ ಬೆಳಗಾವಿ ಜಿಲ್ಲೆ ಮೂಡಲಗಿ ತಾಲ್ಲೂಕಿನ ಕಮಲದಿನ್ನಿ, ಹಳ್ಳೂರ ಶಿವಾಪೂರ , ಸುಣಧೋಳಿ ಪಟಗುಂದಿ ಸೇರಿದಂತೆ ಅನೇಕ ಗ್ರಾಮಗಳ ಜನರು ತಮ್ಮ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಗೆದಿದ್ದು ನಗರ ಪ್ರದೇಶಗಳಿಗೆ ಸಂಚಾರವಿಲ್ಲದಂತಾಗಿದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ.
ಇನ್ನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯರು ಹಾಗೂ ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ಹೋಗಲಾಗದೇ ನರಕಯಾತನೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಜೆಸಿಬಿಯಿಂದ ಈ ರೀತಿಯ ರಸ್ತೆ ಅಗೆತ ಅನೇಕ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸಿ ಕೂಡಲೇ ಅಗೆಯಲಾದ ರಸ್ತೆಗಳನ್ನು ಸಂಚಾರಕ್ಕೆ ಮುಕ್ತಮಾಡಿ ತುರ್ತು ವೈದ್ಯಕೀಯ ಸೇವೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಲಕ್ಕಣ್ಣ ಸವಸುದ್ದಿ ಆಗ್ರಹಿಸಿದ್ದಾರೆ.
ಲಕ್ಕಣ್ಣ ಸವಸುದ್ದಿ ಈ ಸಂಬಂಧ ಉತ್ತರ ವಲಯ ಐಜಿಪಿ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಜೊತೆಗೆ ದೂರವಾಣಿ ಮೂಲಕ ಮಾತನಾಡಿ ಜನರು ಪಡುತ್ತಿರುವ ತೊಂದರೆಯನ್ನು ವಿವರಿಸಿದ್ದಾರೆ.