ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಸುಸ್ಥಿರ ಇಂಧನ ಅಭಿವೃದ್ಧಿ ಅತ್ಯಗತ್ಯವಿದ್ದು, ಈ ನಿಟ್ಟಿನಲ್ಲಿ ಎನ್ಐಟಿಕೆ ತಂತ್ರಜ್ಞಾನ ಮಹತ್ತರ ಪಾತ್ರ ವಹಿಸಲಿದೆ ಎಂದು ಕೇಂದ್ರ ಶಿಕ್ಷಣ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಅವರು ಶನಿವಾರ ಸುರತ್ಕಲ್ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯದ(ಎನ್ಐಟಿಕೆ) 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮುಖ್ಯ ಭಾಷಣ ಮಾಡಿ ಪದವಿ ಪ್ರದಾನ ನೆರವೇರಿಸಿದರು. ಎನ್ಐಟಿಕೆ ಈಗಾಗಲೇ ಆಹಾರ ತ್ಯಾಜ್ಯ ಬಳಸಿ 100 ಕಿಲೋ ಬಯೋಗ್ಯಾಸ್ ಉತ್ಪಾದಿಸುತ್ತಿದೆ. ಇದನ್ನು ಸರ್ವಸಜ್ಜಿತ ಹೈಡ್ರೋಜನ್ ಇಂಧನ ಸ್ಥಾವರವಾಗಿ ಅಭಿವೃದ್ಧಿಯಾಗುವ ವಿಪುಲ ಅವಕಾಶ ಹೊಂದಿದೆ. ಈ ನಿಟ್ಟಿನಲ್ಲಿ ಹೈಡ್ರೋಜನ್ ಶಕ್ತಿ ಭವಿಷ್ಯದ ಇಂಧನ ಮಾರುಕಟ್ಟೆಯಾಗಲಿದೆ. ಹೀಗಾಗಿ ಎನ್ಐಟಿಕೆಯು ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಮುಂಚೂಣಿಯ ಸಾಧನೆ ಮಾಡಬೇಕಾಗಿದೆ. ಈ ವಿಚಾರದಲ್ಲಿ ಗಮನಾರ್ಹ ಸಂಶೋಧನೆ ನಡೆಸಬೇಕಾಗಿದೆ ಎಂದು ಸಚಿವರು ಹೇಳಿದರು. ಹೈಡ್ರೋಜನ್ ಉತ್ಪಾದನೆ ಭವಿಷ್ಯದ 22ನೇ ಶತಮಾನದ ಬೃಹತ್ ಯೋಜನೆಯಾಗಲಿದ್ದು, ಐಟಿ ಕ್ಷೇತ್ರದಲ್ಲಿ ಇದಕ್ಕೆ ಪೂರಕವಾದ ಕ್ರಾಂತಿಕಾರಕ ಬದಲಾವಣೆ ನಡೆಯಬೇಕಾಗಿದೆ ಎಂದು ಅವರು ಆಶಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಜೈಅನುಸಂಧಾನ್ ಕರೆಯನ್ನು ನೀಡಿದ್ದರು. ಸ್ವಾತಂತ್ರ್ಯೋತ್ಸವದ ಶತಮಾನ ಸಂಭ್ರಮ ವೇಳೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸುವುದು ಗುರಿಯಾಗಿದೆ. ಕೃತಕಬುದ್ಧಿಮತ್ತೆ, ತಂತ್ರಜ್ಞಾನ ಕಲಿಕೆ, ದತ್ತಾಂಶ ವಿಶ್ಲೇಷಣೆ, ಎಲೆಕ್ಟ್ರಾನಿಕ್ಸ್, ಜೀನೋಮ್ ಎಡಿಟಿಂಗ್, 3ಡಿ ಪ್ರಿಂಟಿಂಗ್ ಮುಂತಾದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಯಾಗುತ್ತಿದೆ. ಇದು ಭವಿಷ್ಯದ ಭಾರತದ ಅಭಿವೃದ್ಧಿಗೆ ಪಥಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಬೆಂಗಳೂರಿನ ಸೋನಾ ಗ್ರೂಪ್ ಆಫ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ ಯಜ್ಞನಾರಾಯಣ, ಭಾರತೀಯ ವಲಯ ಮೈರೆ ಟೆಕ್ನಿಮಾಂಟ್ ಇಟಲಿ ಇದರ ಉಪಾಧ್ಯಕ್ಷ ಮಿಲಿಂದ್ ವಿ.ಬರಿಡೇ ಅತಿಥಿಯಾಗಿದ್ದರು. ಎನ್ಐಟಿಕೆ ನಿರ್ದೇಶಕ ಪ್ರೊ.ಪ್ರಸಾದ್ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.
ಘಟಿಕೋತ್ಸವದಲ್ಲಿ ಒಟ್ಟು 1,787 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ 126 ಮಂದಿ ಪಿಎಚ್ಡಿ, 817 ಮಂದಿ ಪಿ.ಜಿ, 844 ಮಂದಿ ಬಿ.ಟೆಕ್ ವಿದ್ಯಾರ್ಥಿಗಳು ಸೇರಿದ್ದಾರೆ. 249 ಬಿ.ಟೆಕ್ ವಿದ್ಯಾರ್ಥಿಗಳಿಗೆ ತಮ್ಮ ಪದವಿ ಜತೆ ಇತರೆ ವಿಭಾಗಗಳಲ್ಲಿ ಮೈನರ್ ಪದವಿಯನ್ನು ಪ್ರದಾನ ಮಾಡಲಾಯಿತು. ಇದೇ ಮೊದಲ ಬಾರಿಗೆ ಎನ್ಐಟಿಕೆ ಬಿ.ಟೆಕ್(ಆನರ್ಸ್) ಪದವಿಯನ್ನು ನೀಡಲಾಯಿತು. ಅತ್ಯಧಿಕ ಅಂಕ ಗಳಿಸಿದ ಒಂಭತ್ತು ಮಂದಿ ಬಿ.ಟೆಕ್ ವಿದ್ಯಾರ್ಥಿಗಳು ಹಾಗೂ 30 ಪಿಜಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನಿಸಲಾಯಿತು.
ಸಂಶೋಧನಾ ಕಟ್ಟಡ ಉದ್ಘಾಟನೆ: ಘಟಿಕೋತ್ಸವಕ್ಕೆ ಮುನ್ನ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎನ್ಐಟಿಕೆಯಲ್ಲಿ ಸುಮಾರು 48 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಕೇಂದ್ರೀಯ ಸಂಶೋಧನಾ ಸೌಲಭ್ಯ(ಸಿಆರ್ಎಫ್) ಮತ್ತು ಸೂಲ್ ಆಫ್ ಇಂಟರ್ ಡಿಸಿಪ್ಲಿನರಿ ಸ್ಟಡೀಸ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ, ನಿರ್ದೇಶಕರಾದ ಪ್ರೊ.ಎಂ.ಎನ್.ರಾಜೇಂದ್ರ, ಸಿಆರ್ಎಫ್ ಅಧ್ಯಕ್ಷ ಪ್ರೊ.ಸತ್ಯನಾರಾಯಣ, ರಿಜಿಸ್ಟ್ರಾರ್ ಪ್ರೊ.ರವೀಂದ್ರನಾಥ್ ಇದ್ದರು.