ಕೂಗು ನಿಮ್ಮದು ಧ್ವನಿ ನಮ್ಮದು

ಹಿಜಾಬ್ ಕೇಸ್: ವಿಸ್ತ್ರತ ಪೀಠದ ನಿರ್ಧಾರಕ್ಕೆ ಕಾಯುತ್ತೇವೆ ಎಂದ ಅರಗ ಜ್ಞಾನೇಂದ್ರ, ಸಿಟಿ ರವಿ!

ಬೆಂಗಳೂರು: ಹಿಜಾಬ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಹಾಗೂ ಹೇಮಂತ್‌ ಗುಪ್ತಾ ಇದ್ದ ದ್ವಿಸದಸ್ಯ ಪೀಠ ಭಿನ್ನ ನಿಲುವು ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪರವಾಗಿ ತೀರ್ಪು ನೀಡಿದರೆ, ಸುಧಾಂಶು ಧುಲಿಯಾ ಇವೆಲ್ಲವೂ ಆಯ್ಕೆಯ ಹಕ್ಕು, ಕೊನೆಯದಾಗಿ ಎಲ್ಲರೂ ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ. ಭಿನ್ನ ತೀರ್ಪು ಬಂದ ಹಿನ್ನಲೆಯಲ್ಲಿ ಪ್ರಕರಣವೀಗ ಸಿಜೆಐ ಪೀಠಕ್ಕೆ ವರ್ಗಾವಣೆಯಾಗಿದ್ದು, ಪೀಠದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವುದನ್ನು ಸ್ವತಃ ಸಿಜೆಐ ತೀರ್ಮಾನ ಮಾಡಲಿದ್ದಾರೆ.

ಇನ್ನು ಮುಂದಿನ ತೀರ್ಪು ಬರುವವರೆಗೂ ರಾಜ್ಯದಲ್ಲಿ ಹಿಜಾಬ್‌ ಕುರಿತಾಗಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪು ಜಾರಿಯಲ್ಲಿರಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಇನ್ನು ರಾಜ್ಯದ ಪ್ರಮುಖ ನಾಯಕರು ಹಾಗೂ ಬಿಜೆಪಿ ಮುಖಂಡರು, ವಿಸ್ತತ ಪೀಠದಲ್ಲಿ ಯಾವ ತೀರ್ಪು ಬರಲಿದೆ ಎನ್ನುವ ಕುತೂಹಲವಿದೆ ಎಂದು ಹೇಳಿದ್ದಾರೆ. ಗೃಹ ಸಚಿವ ಅರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕೂಡ ಪ್ರಕರಣದ ವಿಚಾರವಾಗಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಗೃಹ ಸಚಿವ ಅರಗ ಜ್ಞಾನೇಂದ್ರ: ಈಗಾಗಲೇ ತೀರ್ಪು ಪ್ರಕಟ ಆಗಿದೆ. ಸಿಜೆಐ‌ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಿದ್ದಾರೆ. ಸಿಜೆಐ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದರ ಮೇಲೆ ಎಲ್ಲವೂ ಡಿಪೆಂಡ್‌ ಆಗಿದೆ. ಕರ್ನಾಟಕ ಸರ್ಕಾರ ಸುಪ್ರೀಂ ತೀರ್ಪು ಎದುರು‌ ನೋಡುತ್ತಿದೆ. ಹಿಜಾಬ್‌ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗದಂತೆ ಭದ್ರತೆ ಕೂಡ ಎಲ್ಲಾ ರೀತಿಯಲ್ಲಿ ಮಾಡಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಬಂದೋಬಸ್ತ್ ಮಾಡಿದ್ದೆವು. ಎಲ್ಲಾ ರೀತಿಯಲ್ಲಿ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲಸ ಆಗ್ತಿದೆ.

ಹಿಜಾಬ್‌ ಮೇಲ್ಮನವಿಯನ್ನು ಒಬ್ಬ ನ್ಯಾಯಮೂರ್ತಿ ವಜಾ ಮಾಡಿದ್ದಾರೆ. ವಿಭಿನ್ನ ತೀರ್ಪು ಪ್ರಕಟವಾಗಿ ಈಗ ಸಿಜೆಐ ಪೀಠದಲ್ಲಿ ನಿರ್ಧಾರವಾಗಲಿದೆ. ಅವರು ಏನ್ ಆದೇಶ ಕೊಡ್ತಾರೆ ಅಂತ ಎದುರು ನೋಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಚಿಕ್ಕಮಗಳೂರು ದಲಿತ ಕುಟುಂಬಗಳಿಗೆ ಪ್ಲಾಂಟರ್‌ಗಳಿಂದ ದೌರ್ಜನ್ಯ ಪ್ರಕರಣದ ಕುರಿತಾಗಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಎಫ್ಐಆರ್ ಆಗಿದೆ. ಹೆಚ್ಚಿನ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ.

ಕಾನೂನು ಎಲ್ಲರಿಗೂ ಒಂದೇ, ಕಾನೂನು ಪ್ರಕಾರ ಕ್ರಮ ತಗೋತೇವೆ ಎಂದರು. ಇದೇ ವೇಳೆ 3.5 ಸಾವಿರ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗಳಿಗೆ ಆಹ್ವಾನಿಸಲಾಗಿರುವ ಬಗ್ಗೆ ಮಾತನಾಡಿದ ಅವರು, ಪಿಸಿ ನೇಮಕಾತಿ ಪಾರದರ್ಶಕವಾಗಿ ನಡೆಸುತ್ತೇವೆ. ಹಿಂದಿನ ಪ್ರಕರಣ ಗಮನದಲ್ಲಿಟ್ಕೊಂಡು ಈ ಪರೀಕ್ಷೆಯನ್ನು ಲೋಪವಾಗದಂತೆ ನಡೆಸಲಿದ್ದೇವೆ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ನಡೆಯುತ್ತಿದೆ. ಈಗಾಗಲೇ 98 ಜನರ ಬಂಧನವಾಗಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದರು.


ಈದ್ಗಾ ಪ್ರಕರಣದ ಬಗ್ಗೆ ಮಾತು: ಚಾಮರಾಜಪೇಟೆ ಈದ್ಗಾ ಮೈದಾನ ಪ್ರಕರಣದ ಬಗ್ಗೆ ಮಾತನಾಡಿದ ಅರಗ ಜ್ಞಾನೇಂದ್ರ, ಈ ಪ್ರಕರಣವನ್ನೂ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಈ ಪ್ರಕರಣವನ್ನು ಸಹ ಗಮನಿಸುತ್ತಿದ್ದೇವೆ. ಆದರೆ ಸರ್ಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಏನೇ ತೀರ್ಪು ಬಂದರೂ ಮಾನ್ಯ ಮಾಡುತ್ತೇವೆ ಎಂದಿದ್ದಾರೆ.

ಪಿಎಫ್‌ಐ ಮುಖಂಡರ ವಿಚಾರಣೆ: ನಿಷೇಧಿತ ಪಿಎಫ್ಐ ಮುಖಂಡರ ಮನೆಗಳ ಮೇಲೆ ದಾಳಿ ವಿಚಾರದಲ್ಲಿ ಮಾತನಾಡಿದ ಅವರು, ಪಿಎಫ್ಐ ಬ್ಯಾನ್ ಆದ ನಂತರ ಮಂಗಳೂರಿನಲ್ಲಿ ನಾಲ್ಕೈದು ಕಡೆ ದಾಳಿ ನಡೆದಿದೆ. ಕೆಲವು ಪಿಎಫ್ಐ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಇದು ತನಿಖಾ ಹಂತದಲ್ಲಿದೆ, ಸದ್ಯ ಏನೂ ಮಾತನಾಡಲ್ಲ. ವಶಕ್ಕೆ ಪಡೆದವರನ್ನು ಬೇರೆ ಬೇರೆ ಪ್ರಕರಣಗಳಲ್ಲಿ ವಿಚಾರಣೆ ಮಾಡಲು ಅವಕಾಶ ಇದೆ ಎಂದಿದ್ದಾರೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ ಎಂದ ಸಿಟಿ ರವಿ
ಇನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನವದೆಹಲಿಯಿಂದ ಪ್ರತಿಕ್ರಿಯೆ ನೀಡಿದ್ದು ತೀರ್ಪಿನ ವಿಚಾರವಾಗಿ ನಾನೇನೂ ಹೇಳೋದಿಲ್ಲ. ಈಗ ಪ್ರಕರಣ ಸಿಜೆಐ ಮುಂದಿದೆ. ಯಾವ ತೀರ್ಪು ಬರುತ್ತೋ ನೋಡೋಣ. ಇರಾನ್ ಮತ್ತು ತಾಲಿಬಾನ್ ರಾಷ್ಟ್ರಗಳಲ್ಲಿ ಹಿಜಾಬ್ ವಿರುದ್ದ ಧ್ವನಿ ಏರುತ್ತಿದೆ. ಪಾಕ್ ನಲ್ಲಿ ಟಿ ವಿ ನಿರೂಪಕಿ ಹಿಜಾಬ್ ವಿರುದ್ದ ಪ್ರತಿಭಟನೆ ಮಾಡಿದ್ದಾರೆ. ಹಿಜಾಬ್ ವಿಚಾರ ಮುಂದೆ ಮಾಡಿದ್ದು ಮೂಲಭೂತ ವಾದ ಸಂಚು ಕಾಣಿಸುತ್ತಿದೆ. ಶಾಲೆಗಳಲ್ಲಿ ಸಮವಸ್ತ್ರ ಬೇಕು ಅನ್ನುವ ನಿಲುವಿಗೆ ನಾವು ಬದ್ದ. ಭಿನ್ನಾಭಿಪ್ರಾಯ ಬಂದಾಗ ವಿಸ್ತ್ರತ ಪೀಠ ತೀರ್ಮಾನ ಮಾಡುತ್ತದೆ. ಜಾಗತಿಕ ಮಾನಸಿಕತೆ, ಮುಸ್ಲಿಂ ರಾಷ್ಟ್ರಗಳಲ್ಲಿ ಹಿಜಾಬ್ ವಿರೋಧಿ ಹೋರಾಟ ನಡೆಯುತ್ತಿದೆ ಎಂದಿದ್ದಾರೆ

error: Content is protected !!