ಕೂಗು ನಿಮ್ಮದು ಧ್ವನಿ ನಮ್ಮದು

ಹಿಜಾಬ್ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಹೇಳಿದ್ದೇನು?

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲೂ ಹಿಜಾಬ್‌ ಕುರಿತಾಗಿ ಸ್ಪಷ್ಟವಾದ ತೀರ್ಪು ಬಂದಿಲ್ಲ. ಈ ಬಾರಿ ನಿವೃತ್ತಿಯಾಗಲಿರುವ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯುವ ಮೂಲಕ, ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಎಲ್ಲಾ 26 ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದ್ದರು. ಇನ್ನೊಂದೆಡೆ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮಾತ್ರ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿ, ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವನ್ನು ವಜಾ ಮಾಡಿದರು.

ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್‌ ಯುದ್ಧ, ಇಡೀ ರಾಷ್ಟ್ರಕ್ಕೆ ವ್ಯಾಪಿಸಿತ್ತು. ಇದರ ಸಂಪೂರ್ಣ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌, ಮಾರ್ಚ್‌ 15 ರಂದು ನೀಡಿದ್ದ ತೀರ್ಪಿನಲ್ಲಿ ಶಾಲಾ-ಕಾಲೇಜುಗಳು ಇವುಗಳಿಗೆ ಬಳಕೆ ಆಗಬಾರದು. ಸಮವಸ್ತ್ರ ಕಡ್ಡಾಯ ಇರುವ ಕಡೆ ಕೇವಲ ಸಮವಸ್ತ್ರ ಧರಿಸಿ ಹೋಗಬೇಕು. ಹಿಜಾಬ್‌ ಧರಿಸುವಂತಿಲ್ಲ ಎಂದು ತೀರ್ಪು ನೀಡಿತ್ತು. ಇದರ ಬೆನ್ನಲ್ಲಿಯೇ ಅರ್ಜಿದಾರರಾಗಿದ್ದ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸೆಪ್ಟೆಂಬರ್‌ನಲ್ಲಿ ಅಂದಾಜು 10 ದಿನಗಳ ಕಾಲ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಸೆ.22 ರಂದು ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು.

ನ್ಯಾಯಮೂರ್ತಿ ಹೇಮಂತ್‌ ಗುಪ್ತಾ: ನಮ್ಮ ತೀರ್ಪಿನಲ್ಲಿ ಭಿನ್ನ ಅಭಿಪ್ರಾಯವಿದೆ. ವಿಚಾರಣೆಯ ವೇಳೆ ನಾನು 11 ಪ್ರಶ್ನೆಗಳನ್ನು ಎತ್ತಿದ್ದೇನೆ. ಮೇಲ್ಮನವಿಗಳ ವಿರುದ್ಧದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ಮೇಲ್ಮನವಿಗಳನ್ನು ವಜಾಗೊಳಿಸಲು ಮುಂದಾಗುತ್ತಿದ್ದೇನೆ. ಕರ್ನಾಟಕ ಹೈಕೋರ್ಟ್‌ ನೀಡಿದ ಆದೇಶವನ್ನು ಎತ್ತಿ ಹಿಡಿಯುತ್ತಿದ್ದೇನೆ.

ನ್ಯಾಯಮೂರ್ತಿ ಸುಧಾಂಶು ಧುಲಿಯಾ: ನನ್ನ ತೀರ್ಪಿನ ಮುಖ್ಯ ಅಂಶವೆಂದರೆ ವಿವಾದಕ್ಕೆ ಅಗತ್ಯವಾದ ಧಾರ್ಮಿಕ ಆಚರಣೆಯ ಸಂಪೂರ್ಣ ಪರಿಕಲ್ಪನೆಯು ಅನಿವಾರ್ಯವಲ್ಲ. ಹೈಕೋರ್ಟ್ ತಪ್ಪು ದಾರಿ ಹಿಡಿದಿದೆ. ಇದು ಅಂತಿಮವಾಗಿ ಆಯ್ಕೆಯ ವಿಷಯವಾಗಿದೆ ಮತ್ತು ಆರ್ಟಿಕಲ್ 14 ಮತ್ತು 19. ಒಟ್ಟಾರೆ ಇದೊಂದು ಆಯ್ಕೆಯ ವಿಚಾರ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ನನ್ನ ಮನಸ್ಸಿನಲ್ಲಿ ಏಳುವ ಮೊಟ್ಟಮೊದಲ ಪ್ರಶ್ನೆ ಹೆಣ್ಣು ಮಗುವಿನ ಶಿಕ್ಷಣ.

ನಾವು ಅವಳ ಜೀವನವನ್ನು ಉತ್ತಮಗೊಳಿಸುತ್ತಿದ್ದೇವೆಯೇ? ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿದೆ. ಫೆಬ್ರವರಿ 5 ರ ಸರ್ಕಾರಿ ಆದೇಶವನ್ನು ರದ್ದುಗೊಳಿಸಿದ್ದೇನೆ ಮತ್ತು ನಿರ್ಬಂಧಗಳನ್ನು ತೆಗೆದುಹಾಕಲು ಆದೇಶಿಸುತ್ತೇನೆ. ಬಿಜೋ ಇಮ್ಯಾನುಯೆಲ್ ಅವರ ತೀರ್ಪು ಈ ಸಮಸ್ಯೆಯನ್ನು ಸಂಪೂರ್ಣವಾಗಿ ಒಳಗೊಂಡಿದೆ ಎಂದು ನಾನು ಭಾವಿಸಿದ್ದೇನೆ.

ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ, ಸೂಕ್ತ ನಿರ್ದೇಶನಗಳಿಗಾಗಿ ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಾಧೀಶರ ಮುಂದೆ ಈ ಪ್ರಕರಣವನ್ನು ಇಡಲಾಗಿದೆ ಎಂದು ಇಬ್ಬರೂ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಮುಂದೇನು: ಹಿಜಾಬ್‌ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ವಾದ ವಿವಾದದ ಬಳಿಕ, ಸುಪ್ರೀಂ ಕೋರ್ಟ್‌ನಲ್ಲೂ ಹಲವು ದಿನಗಳ ವಿಚಾರಣೆ ನಡೆಸಿದೆ. ಈಗ ದ್ವಿಸದಸ್ಯ ಪೀಠ ಪ್ರಕರಣದಲ್ಲಿ ವಿಭಿನ್ನ ತೀರ್ಪು ಮಾಡಿರುವ ಕಾರಣ, ಇದೀಗ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯ ಮುಂದೆ ಹೋಗಲಿದೆ. ಪ್ರಕರಣವನ್ನು ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕೋ ಅಥವಾ ಮೂವರು ನ್ಯಾಯಮೂರ್ತಿಗಳ ವಿಸ್ತ್ರತ ಪೀಠಕ್ಕೆ ವರ್ಗಾಯಿಸಬೇಕೋ ಎನ್ನುವುದನ್ನು ಅವರು ತೀರ್ಮಾನ ಮಾಡಲಿದ್ದಾರೆ.

ಇದರಲ್ಲಿ ಯಾರೆಲ್ಲಾ ನ್ಯಾಯಮೂರ್ತಿಗಳು ಇರಲಿದ್ದಾರೆ ಎನ್ನುವುದನ್ನು ಸಿಜೆಐ ಅವರೇ ತೀರ್ಮಾನಿಸಿ ಪ್ರಕಟಿಸಲಿದ್ದಾರೆ. ಆ ಬಳಿಕ ವಿಸ್ತ್ರತ ಪೀಠದ ಎದುರು ವಿಚಾರಣೆ ನಡೆದ ಬಳಿಕ ತೀರ್ಪು ಪ್ರಕಟವಾಗಲಿದೆ.

ಹಿಜಾಬ್‌ ಕಥೆಯೇನು?: ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಬಾರದ ಹಿನ್ನಲೆಯಲ್ಲಿ, ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶವೇ ಈಗ ಜಾರಿಯಲ್ಲಿರಲಿದೆ. ರಾಜ್ಯ ಸರ್ಕಾರ ಸಮವಸ್ತ್ರ ಕಡ್ಡಾಯ ಎಂದಿರುವ ಕಡೆ ಹಿಜಾಬ್‌ಗೆ ಅವಕಾಶ ಇರುವುದಿಲ್ಲ. ಇದನ್ನು ರಾಜ್ಯ ಶಿಕ್ಷಣ ಸಚಿವ ನಾಗೇಶ್‌ ಕೂಡ ಹೇಳಿದ್ದಾರೆ.

error: Content is protected !!