ಕೂಗು ನಿಮ್ಮದು ಧ್ವನಿ ನಮ್ಮದು

‘ಪ್ರಿನ್ಸ್’ ಮನೆಯಲ್ಲಿ ಶೋಕ, ಚಿರು ಚಿತ್ರಕ್ಕೆ ಪ್ರೀ-ರಿಲೀಸ್ ಇವೆಂಟ್; ಮಳೆಯಲ್ಲಿ ನಿಂತು ಮೆಗಾಸ್ಟಾರ್ ಹೇಳಿದ್ದೇನು?

ಟಾಲಿವುಡ್ ನಟ ಮಹೇಶ್ ಬಾಬು ಅವರ ಪಾಲಿಗೆ ಬುಧವಾರ ತುಂಬ ಕರಾಳ ದಿನ ಆಗಿತ್ತು. ನಸುಕಿನ 4 ಗಂಟೆ ಸುಮಾರಿಗೆ ಅವರ ತಾಯಿ ಇಂದಿರಾ ದೇವಿ ನಿಧನರಾದರು. ಅವರ ಮನೆಗೆ ಅನೇಕರು ಬಂದು ಸಾಂತ್ವನ ಹೇಳಿದರು. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸಿದರು.

ಆದರೆ ಅದೇ ದಿನ ಸಂಜೆ ‘ಮೆಗಾ ಸ್ಟಾರ್’ ಚಿರಂಜೀವಿ ನಟನೆ ‘ಗಾಡ್ ಫಾದರ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿ ಆಗಿದ್ದರು. ವೇದಿಕೆಯಲ್ಲಿ ನಿಂತ ಚಿರಂಜೀವಿ ಅವರು ಮಹೇಶ್ ಬಾಬು ಕುಟುಂಬದ ಬಗ್ಗೆ ಸಾಂತ್ವನದ ಮಾತುಗಳನ್ನು ಆಡಿದರು.

ಚಿತ್ರರಂಗ ಒಂದು ಕುಟುಂಬ ಇದ್ದಂತೆ. ಸಾಮಾನ್ಯವಾಗಿ ಕಲಾವಿದರಲ್ಲಿ ಯಾರಿಗಾದರೂ ಏನಾದರೂ ಅಹಿತಕರವಾದ್ದು ನಡೆದರೆ ಅಂದು ಬೇರೆ ಯಾವುದೇ ಸೆಲೆಬ್ರಿಟಿಗಳು ತಮ್ಮ ಸಿನಿಮಾಗೆ ಸಂಬಂಧಿಸಿದ ಖುಷಿಯ ಕಾರ್ಯವನ್ನು ಇಟ್ಟುಕೊಳ್ಳುವುದಿಲ್ಲ. ಆದರೆ ಕೆಲವೊಮ್ಮೆ ಅನಿವಾರ್ಯ ಆಗುತ್ತದೆ. ‘ಶೋ ಮಸ್ಟ್ ಗೋ ಆನ್’ ಎಂಬಂತೆ ನಿರ್ಮಾಪಕರ ಹಿತದೃಷ್ಟಿಯಿಂದ ಕೆಲವೊಂದು ಕಾರ್ಯಕ್ರಮವನ್ನು ಮುಂದುವರಿಸಬೇಕಾಗುತ್ತದೆ.

ಮಹೇಶ್ ಬಾಬು ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾದ ದಿನವೇ ಚಿರಂಜೀವಿ ನಟನೆಯ ‘ಗಾಡ್ ಫಾದರ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ. ಕಾರ್ಯಕ್ರಮ ನಡೆಯುವಾಗ ಜೋರಾಗಿ ಮಳೆ ಸುರಿಯುತ್ತಿತ್ತು. ವೇದಿಕೆಯಲ್ಲಿದ್ದ ಇತರೆ ಸೆಲೆಬ್ರಿಟಿಗಳ ರೀತಿ ಚಿರಂಜೀವಿ ಕೂಡ ಪೂರ್ತಿ ನೆನೆದುಹೋದರು. ಈ ಸಂದರ್ಭದಲ್ಲಿ ಅವರು ‘ಪ್ರಿನ್ಸ್’ ಕುಟುಂಬದ ಬಗ್ಗೆ ಮಾತಾಡಿದರು.

ಇಂದು ಸೂಪರ್ ಸ್ಟಾರ್ ಕೃಷ್ಣ ಅವರ ಮಡದಿ, ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನರಾಗಿದ್ದಾರೆ. ಆ ಕುಟುಂಬ ಇಂದು ತುಂಬ ದುಃಖದಲ್ಲಿದೆ. ಆ ಮಹಾತಾಯಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಈ ವೇದಿಕೆಯಿಂದ ನಾನು ಪ್ರಾರ್ಥಿಸುತ್ತೇನೆ’ ಎಂದು ಚಿರಂಜೀವಿ ಹೇಳಿದರು.

ಈ ವರ್ಷ ಬಿಡುಗಡೆ ಆದ ಚಿರು ನಟನೆಯ ‘ಆಚಾರ್ಯ’ ಸಿನಿಮಾ ಸೋಲುಂಡಿತ್ತು. ಹಾಗಾಗಿ ‘ಗಾಡ್​ ಫಾದರ್​’ ಚಿತ್ರ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈ ಸಿನಿಮಾ ಅಕ್ಟೋಬರ್​ 5ರಂದು ತೆರೆಕಾಣಲಿದೆ. ಇದು ಮಲಯಾಳಂನ ‘ಲೂಸಿಫರ್​’ ಚಿತ್ರದ ತೆಲುಗು ರಿಮೇಕ್​. ಈ ಸಿನಿಮಾದಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಹಾಗಾಗಿ ಬಾಲಿವುಡ್​ ಮಂದಿ ಕೂಡ ‘ಗಾಡ್​ ಫಾದರ್​’ ಮೇಲೆ ಒಂದು ಕಣ್ಣು ಇಟ್ಟಿದ್ದಾರೆ.

error: Content is protected !!