ಕೂಗು ನಿಮ್ಮದು ಧ್ವನಿ ನಮ್ಮದು

ಕಬಡ್ಡಿ ಆಟಗಾರ್ತಿಯರಿಗೆ ಟಾಯ್ಲೆಟ್ನಲ್ಲಿ ಊಟ ವಿತರಣೆ: ಶಾಕಿಂಗ್ ವಿಡಿಯೋ ವೈರಲ್

ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಆಗಿದ್ದರೂ ಕೂಡ ಕ್ರಿಕೆಟ್ಗೆ ಇರುವಂತಹ ಪ್ರಾಮುಖ್ಯತೆ ಇತರೆ ಯಾವುದೇ ಕ್ರೀಡೆಗಳಿಗಿಲ್ಲ. ದಿನ ಬೆಳಗಾಗುವಷ್ಟರಲ್ಲಿ ಓರ್ವ ಕ್ರಿಕೆಟ್ ಆಟಗಾರ ಕೋಟ್ಯಾದಿಪತಿಯಾದ ಉದಾಹರಣೆ ಇದೆ. ಆದರೆ, ದೇಶದಲ್ಲಿ ಹಾಕಿ, ಕಬಡ್ಡಿ ಸೇರಿದಂತೆ ಇತರೆ ಕ್ರೀಡೆಗಳಿಗೆ ಸಿಗಬೇಕಾದ ಗೌರವ ಕೂಡ ದೊರಕುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಸಹರಾನ್ ಪುರದಲ್ಲಿ ನಡೆದ ಬಾಲಕಿಯರ ಕಬಡ್ಡಿ ಟೂರ್ನಿ ವೇಳೆ ಶೌಚಾಲಯದಲ್ಲಿ ಬೇಯಿಸಿದ ಆಹಾರವನ್ನೇ ಕ್ರೀಡಾಪಟುಗಳಿಗೆ ಬಡಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಮೂರು ದಿನಗಳ ಕಾಲ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬ್ಬಡಿ ಟೂರ್ನಿ ನಡೆದಿದ್ದು, ಈ ಸಂದರ್ಭದಲ್ಲಿ ಆಟಗಾರರಿಗೆ ಟಾಯ್ಲೆಟ್ ನಲ್ಲಿ ಇಟ್ಟಿದ್ದ ಆಹಾರವನ್ನು ಬಡಿಸಲಾಗಿದೆ. ಈ ಬಗ್ಗೆ NDTV ವರದಿ ಮಾಡಿದೆ.

ಶೌಚಾಲಯದ ನೆಲದ ಮೇಲೆ ಬೇಯಿಸಿದ ಅನ್ನದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾದ ಬುಗಿಲೆದ್ದಿದೆ. ಆದರೆ ಸಹರಾನ್ಪುರ್ ಕ್ರೀಡಾ ಅಧಿಕಾರಿ ಇದನ್ನು ತಳ್ಳಿ ಹಾಕಿದ್ದಾರೆ. ಆಟಗಾರರಿಗೆ ಅತ್ಯುತ್ತಮ ಗುಣಮಟ್ಟದ ಆಹಾರ ವಿತರಿಸಲಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಆಟಗಾರರು ಈ ಹೇಳಿಕೆಯನ್ನು ವಿರೋಧಿಸಿದ್ದು, ನಮಗೆ ನೀಡಲಾಗಿದ್ದ ಆಹಾರ ಗುಣಮಟ್ಟದಲ್ಲಿರಲಿಲ್ಲ. ಅಲ್ಲದೆ ಆಹಾರ ತಯಾರಿಗೆ ಸ್ಥಳಾವಕಾಶ ಇಲ್ಲವೆಂಬ ಕಾರಣಕ್ಕೆ ಟಾಯ್ಲೆಟ್ ಪಕ್ಕದ ಜಾಗದಲ್ಲಿಯೇ ಇದನ್ನು ತಯಾರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ರಾಜ್ಯಮಟ್ಟದ ಅಂಡರ್-17 ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಸುಮಾರು 200 ಕ್ರೀಡಾಪಟುಗಳಿಗೆ ಶೌಚಾಲಯದ ನೆಲದಲ್ಲಿ ಬೇಯಿಸಿದ ಆಹಾರವನ್ನೇ ನೀಡಲಾಗಿದೆ. ಜೊತೆಗೆ ಒಂದು ಕಾಗದದ ಮೇಲೆ ಪೂರಿಯನ್ನು ಇಡಲಾಗಿತ್ತು. ಅದನ್ನೇ ಆಟಗಾರರಿಗೆ ಬಡಿಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದಾರೆ.

ವೈರಲ್ ಆಗುತ್ತಿರುವ ಒಂದು ನಿಮಿಷದ ವಿಡಿಯೋದಲ್ಲಿ ಶೌಚಾಲಯದ ನೆಲದ ಮೇಲೆ ಇರಿಸಲಾದ ಅನ್ನದ ತಟ್ಟೆಯಿಂದ ಆಟಗಾರ್ತಿಯರು ಸ್ವತಃ ಅನ್ನ ಹಾಗೂ ತರಕಾರಿಗಳನ್ನು ಬಡಿಸಿಕೊಂಡು ಶೌಚಾಲಯದಿಂದ ಹೊರ ಬರುವುದನ್ನು ಕಾಣಬಹುದು. ಸಹರಾನ್‌ಪುರದ ಜಿಲ್ಲಾಧಿಕಾರಿ ಅಖಿಲೇಶ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ರೀತಿಯ ಕೆಟ್ಟ ವ್ಯವಸ್ಥೆಗಳ ಬಗ್ಗೆ ದೂರು ಸ್ವೀಕರಿಸಿದ್ದೇವೆ. ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ನಾನು ತನಿಖೆಗೆ ಆದೇಶಿಸಿದ್ದೇನೆ ಮತ್ತು ಸಂಬಂಧಿಸಿದವರು ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸುತ್ತಾರೆ. ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.

error: Content is protected !!