ಕಲಬುರಗಿ: ಕೇವಲ ಒಂಭತ್ತು ಸಾವಿರ ರಪಾಯಿ ಸಾಲವನ್ನು ವಾಪಸ್ ನೀಡಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಜನನಿಬಿಡ ರಸ್ತೆಯ ಮಧ್ಯದಲ್ಲಿಯೇ ಈ ಘಟನೆ ನಡೆದಿದೆ. ಸಾಲವಾಗಿ ಪಡೆದುಕೊಂಡಿದ್ದ 9 ಸಾವಿರ ರೂ.ವನ್ನು ಮರುಪಾವತಿಸಲಿಲ್ಲವೆಂಬ ವ್ಯಕ್ತಿಯೊಬ್ಬನ ಜೊತೆಗೆ ಜಗಳಕ್ಕಿಳಿದಿದ್ದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಈ ಸಂಪೂರ್ಣ ಘಟನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೂಲಗಳ ಪ್ರಕಾರ ಕಲಬುರಗಿ ನಿವಾಸಿ ಝಮೀರ್ ಪರಿಚಿತ ಸಮೀರ್ ಎಂಬುವರಿಂದ 9 ಸಾವಿರ ರೂ. ಸಾಲ ಪಡೆದುಕೊಂಡಿದ್ದನಂತೆ. ಕೆಲ ತಿಂಗಳ ಬಳಿಕ ಸಮೀರ್ ಸಾಲವಾಗಿ ನೀಡಿದ್ದ ಹಣವನ್ನು ಹಿಂತಿರುಗಿಸಲು ಕೇಳಿದಾಗ ಜಮೀರ್ ಏನೇನೋ ಕಾರಣ ಹೇಳಿ ತಪ್ಪಿಸಿಕೊಳ್ಳುತ್ತಿದ್ದನಂತೆ.
ಜಮೀರ್ ಹಣ ವಾಪಸ್ ನೀಡದ ಕಾರಣ ಇವರಿಬ್ಬರ ನಡುವೆ ಜಗಳವಾಗುತ್ತಿತ್ತು. ಶನಿವಾರ(ಸೆ.17) ಸಮೀರ್ ತನ್ನ ಸ್ನೇಹಿತ ಆಕಾಶ್ ಜೊತೆ ಸೇರಿ ಹರಿತವಾದ ಆಯುಧಗಳಿಂದ ಜೇವರ್ಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಮೀರ್ ಮೇಲೆ ಹಲ್ಲೆ ನಡೆಸಿದ್ದಾನೆ.
ಚಾಕುವಿನಿಂದ ಇರಿದ ತಕ್ಷಣ ಜಮೀರ್ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಆತನನ್ನು ಅಟ್ಟಿಸಿಕೊಂಡ ಹೋದ ಸಮೀರ್ ಮತ್ತು ಆಕಾಶ್ ಹಲವಾರು ಬಾರಿ ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡ ಜಮೀರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೃತ್ಯ ಎಸಗಿದ ಬಳಿಕ ಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ಜನಸಂದಣಿ ಇದ್ದರೂ ದಾರಿಹೋಕರು ಜಮೀರ್ನನ್ನು ರಕ್ಷಿಸಲು ಮುಂದಾಗಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಬಲೆ ಬಿಸಿದ್ದಾರೆ.