ಕೂಗು ನಿಮ್ಮದು ಧ್ವನಿ ನಮ್ಮದು

ವಾರದ ಅಂತರದಲ್ಲಿ 2 ಕರುಗಳಿಗೆ ಜನ್ಮ ನೀಡಿದ ಎಮ್ಮೆ, ವೈದ್ಯಲೋಕಕ್ಕೆ ಅಚ್ಚರಿ

ಸಾಗರ: ಎಮ್ಮೆಯೊಂದು ಒಂದು ಕರುಗೆ ಜನ್ಮ ನೀಡಿ, ವಾರ ಬಿಟ್ಟು ಮತ್ತೊಂದು ಕರುಗೆ ಜನ್ಮ ನೀಡಿರುವ ಅಪರೂಪದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ವೈದ್ಯ ಲೋಕಕ್ಕೂ ಕೂಡ ಅಚ್ಚರಿ ಮೂಡಿಸಿದೆ. ಹೌದು, ಇಲ್ಲಿನ ನಾಡಕಲಸಿ ಗ್ರಾಮದ ಎಮ್ಮೆಯೊಂದು ಒಂದು ವಾರದ ಅಂತರದಲ್ಲಿಎರಡು ಕರುಗಳಿಗೆ ಜನ್ಮ ನೀಡಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಸೆಪ್ಟೆಂಬರ್ 13 ರಂದು ಮೊದಲ ಕರುಗೆ ಜನ್ಮಕೊಟ್ಟಿದ್ದ ಎಮ್ಮೆ, ಬಳಿಕ ವಾರ ಬಿಟ್ಟು ಗುಡ್ಡಕ್ಕೆ ಮೇಯಲು ಹೋದಾಗ ಮತ್ತೊಂದು ಕರುಗೆ ಜನ್ಮ ನೀಡಿದೆ.

ಸಾಮಾನ್ಯವಾಗಿ ಅವಳಿ ಕರುಗಳಾದರೆ, ಒಟ್ಟಿಗೆ ಕೆಲವು ನಿಮಿಷಗಳು ಅಥವಾ ಗಂಟೆಗಳ ಅಂತರದಲ್ಲಿ ಹುಟ್ಟುತ್ತವೆ. ಆದರೆ, ಇಲ್ಲಿ ವಾರಗಳ ಅಂತರದಲ್ಲಿ ಎರಡು ಕರುಗಳು ಹುಟ್ಟಿರುವುದಕ್ಕೆ ಪ್ರತ್ಯೇಕವಾಗಿ ಗರ್ಭಕಟ್ಟಿರುವುದು ಕಾರಣ ಎನ್ನಲಾಗುತ್ತಿದೆ. ಸ್ಥಳೀಯ ಪಶುಪಾಲಕರ ಪ್ರಕಾರ, ಎಮ್ಮೆಯು ಬೆದೆಗೆ ಬಂದು ಮೊದಲು ಒಂದು ಗರ್ಭ ಕಟ್ಟಿದೆ. ಆನಂತರ ಮತ್ತೊಮ್ಮೆ ಕೋಣದ ಸಂಪರ್ಕಕ್ಕೆ ಬಂದು ಮತ್ತೊಮ್ಮೆ ಗರ್ಭ ಕಟ್ಟಿದೆ. ನೈಸರ್ಗಿಕ ಗರ್ಭಧಾರಣೆಯಲ್ಲಿ ಹೀಗೆ ಆಗುವ ಸಾಧ್ಯತೆ ಇದೆ. ಆದರೆ ಇಂತಹ ಘಟನೆ ತುಂಬಾ ಅಪರೂಪ ಎಂದಿದ್ದಾರೆ.

ವಿಭಿನ್ನ ಸಂದರ್ಭದಲ್ಲಿ ಗರ್ಭ ಕಟ್ಟಿದ ಹಿನ್ನೆಲೆಯಲ್ಲಿ ಬೇರೆ ಬೇರೆ ಆಗಿ ಅವಳಿ ಕರುಗಳು ಹುಟ್ಟಿವೆ. ಈ ಘಟನೆಯು ಸ್ಥಳೀಯರ ಗಮನ ಸೆಳೆದಿದ್ದು ಈ ಅಪರೂಪದ ಕರುಗಳನ್ನು ನೋಡಲು ಸುತ್ತಮುತ್ತಲ ಹಳ್ಳಿಗಳಿಂದಲೂ ಜನರು ಬರುತ್ತಿದ್ದಾರೆ.

error: Content is protected !!