ನವದೆಹಲಿ: ಹದಿನಾರು ವರ್ಷದ ಯುವತಿಯನ್ನು ನಾಲ್ವರು ಪುರುಷರು ಮತ್ತು ಇಬ್ಬರು ಅಪ್ರಾಪ್ತರು ಥಳಿಸಿ ಸಾಮೂಹಿಕ ಅತ್ಯಾಚಾರವೆಸಗಿದ ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣದ 6 ಆರೋಪಿಗಳ ಪೈಕಿ ಮೂವರನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಜಿಲ್ಲಾಡಳಿತವು ಅವರಿಗೆ ಸಂಬಂಧಿಸಿದ ಅಕ್ರಮ ಕಟ್ಟಡಗಳ ನೆಲಸಮ ಮಾಡುತ್ತಿದೆ.
ಬಿಜೆಪಿ ನೇತೃತ್ವದ ಸರ್ಕಾರಗಳು ಅನೇಕ ರಾಜ್ಯಗಳಲ್ಲಿ ಅಪರಾಧಗಳಲ್ಲಿ ಆರೋಪಿಗಳ ವಿರುದ್ಧ ಬುಲ್ಡೋಜರ್ ಕ್ರಮವನ್ನು ಆಶ್ರಯಿಸುತ್ತಿವೆ. ರೇವಾ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಮೀ ದೂರದಲ್ಲಿರುವ ನೈಗರ್ಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಅನಿಲ್ ಸೋಂಕರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪಿಟಿಐ ವರದಿಯ ಪ್ರಕಾರ, ಅತ್ಯಾಚಾರಕ್ಕೊಳಗಾದ ಯುವತಿ ಶನಿವಾರ ಮಧ್ಯಾಹ್ನ ತನ್ನ ಗೆಳೆಯನೊಂದಿಗೆ ದೇವಸ್ಥಾನಕ್ಕೆ ಹೋಗಿದ್ದರು. ಆಗ ಅಲ್ಲಿಗೆ ಬಂದ ಇಬ್ಬರು ಅಪ್ರಾಪ್ತರು ಸೇರಿದಂತೆ 6 ಆರೋಪಿಗಳು ಆಕೆಯನ್ನು ಎತ್ತಿಕೊಂಡು, ಆ ಯುವತಿಯನ್ನು ಆಕೆಯ ಸ್ನೇಹಿತನ ಮುಂದೆಯೇ ಎಳೆದುಕೊಂಡು ಹೋಗಿದ್ದರು. ನದಿಯ ಬಳಿ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ.
ಆ ಯುವತಿ ಮತ್ತು ಆಕೆಯ ಸ್ನೇಹಿತ ತಮ್ಮನ್ನು ರಕ್ಷಿಸುವಂತೆ ಬೇಡಿಕೊಂಡರೂ ಆರೋಪಿಗಳು ಬಿಡಲಿಲ್ಲ. ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ನಂತರ, ಅವರು ಅವಳನ್ನು ಥಳಿಸಿದ್ದಾರೆ. ನಂತರ ಆಕೆಯ ಮೊಬೈಲ್ ಫೋನ್ ಮತ್ತು ಉಂಗುರವನ್ನು ಕಿತ್ತುಕೊಂಡಿದ್ದಾರೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಇತರರನ್ನು ಪತ್ತೆಹಚ್ಚಲು ಹುಡುಕಾಟ ನಡೆಯುತ್ತಿದೆ. ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಯುವತಿಯ ಆರೋಗ್ಯ ಹದಗೆಟ್ಟಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.