ಬೆಳಗಾವಿ: ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಅಪಾರ ಹಾನಿಯಾಗಿದ್ದು ಯೋಗ್ಯ ರೀತಿಯಲ್ಲಿ ಬೆಳೆ ಹಾನಿಗೆ ಮತ್ತು ಇನ್ನಿತರ ಆಸ್ತಿ ಹಾನಿಗೆ ಪರಿಹಾರ ನೀಡಬೇಕು. ಪರಿಹಾರ ಮೊತ್ತ ಹೆಚ್ಚಿಸುವುದಕ್ಕೆ ಕಾಲಕ್ಕೆ ತಕ್ಕಂತೆ ಎನ್ ಡಿ ಆರ್ ಎಫ್ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಒತ್ತಾಯಿಸಿದ್ದಾರೆ. ಈ ಕುರಿತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಲಿದ್ದೇನೆ ಮತ್ತು ಪ್ರಧಾನ ಮಂತ್ರಿಗಳಿಗೆ ಪತ್ರವನ್ನೂ ಬರೆಯುತ್ತೇನೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅತ್ಯಂತ ಹಳೆಯ ಎನ್ ಡಿ ಆರ್ ಎಫ್ ಮಾರ್ಗಸೂಚಿಗಳಿಂದಾಗಿ ರೈತರಿಗೆ ಅತ್ಯಂತ ಕಡಿಮೆ ಬೆಳೆ ಪರಿಹಾರ ಸಿಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ವಿಪರೀತ ಮಳೆ ಬಿದ್ದು 400 ಕೋಟಿ ರೂ ಗಳಿಗಿಂತ ಹೆಚ್ಚಿನ ಹಾನಿ ಆಗಿದ್ದರೂ ಎನ್ ಡಿ ಆರ್ ಎಫ್ ಮಾರ್ಗಸೂಚಿ ಪ್ರಕಾರ 105 ಕೋಟಿ ರೂ ಹಾನಿ ಆಗಿದೆ ಎಂದು ಬೆಳಗಾವಿ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈಗಿನ ಕಾಲಕ್ಕೆ ಸರಿಹೊಂದದ ಎನ್ ಡಿ ಆರ್ ಎಫ್ ಮಾರ್ಗಸೂಚಿಗಳನ್ನು ಬದಲಾಯಿಸುವದು ಅತ್ಯಗತ್ಯವಾಗಿದೆ. ಕೇಂದ್ರ ಸರಕಾರ ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಚನ್ನರಾಜ್ ಹಟ್ಟಿಹೊಳಿ ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಹಲವಾರು ನಗರಗಳ,ರಸ್ತೆಗಳ ಹೆಸರು ಬದಲು ಮಾಡಿದೆ. ಆದರೆ ಬ್ರಿಟೀಷರ ಕಾಲದಲ್ಲಿ ರೂಪಿಸಲಾದ ಎನ್ ಡಿ ಆರ್ ಎಫ್ ಮಾರ್ಗಸೂಚಿಗಳನ್ನು ಬದಲಾಯಿಸದೇ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ತಕ್ಷಣ ಎನ್ ಡಿ ಆರ್ ಎಫ್ ಪರಿಹಾರದ ಕುರಿತಾದ ಮಾರ್ಗಸೂಚಿಗಳನ್ನು ಬದಲಾಯಿಸಬೇಕು ಎಂದು ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ.
ಅತೀವೃಷ್ಟಿ ಆದಾಗ ಹೆಚ್ಚು ಅನಾಹುತ ಆಗುವುದು ಗ್ರಾಮೀಣ ಪ್ರದೇಶದಲ್ಲಿ. ವಿಶೇಷವಾಗಿ ರೈತರು ಬೆಳೆದ ಬೆಳೆಗಳು ಜಲ ಸಮಾಧಿಯಾಗುತ್ತಲೇ ಇವೆ. ಎನ್ ಡಿ ಆರ್ ಎಫ್ ಹಳೆಯ ಪರಿಹಾರದ ಮಾರ್ಗಸೂಚಿಗಳಿಂದಾಗಿ ರೈತರಿಗೆ ಕಡಿಮೆ ಪರಿಹಾರ ಸಿಗುತ್ತಿದೆ. ಕೇಂದ್ರ ಸರ್ಕಾರ ಈ ಕುರಿತು ತಕ್ಷಣ ಕ್ರಮ ಜರುಗಿಸಬೇಕು. ಮಾರ್ಗಸೂಚಿ ಬದಲಾಯಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಕುರಿತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದು ಚನ್ನರಾಜ್ ಹಟ್ಟಿಹೊಳಿ ತಿಳಿಸಿದ್ದಾರೆ.