ಹಜಾರಿಬಾಗ್: ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಪರಿಣಾಮ ಏಳು ಜನ ಪ್ರಯಾಣಿಕರು ಸಾವನ್ನಪ್ಪಿದ ಘಟನೆ ಜಾರ್ಖಂಡ್ನ ಹಜಾರಿಬಾಗ್ನಲ್ಲಿ ನಡೆದಿದೆ. ಈ ಅವಘಡದಲ್ಲಿ ಅನೇಕರು ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಸಿವಾನ್ ನದಿಯ ಮೇಲಿನ ಸೇತುವೆ ಮೇಲೆ ಸಂಚರಿಸುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಬಸ್ನಲ್ಲಿ ಒಟ್ಟು 50 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಸ್ ಗಿರಿದಿಹ್ನಿಂದ ರಾಂಚಿಗೆ ಹೋಗುತ್ತಿತ್ತು.ಗಿರಿದಿಹ್ ಜಿಲ್ಲೆಯಿಂದ ರಾಂಚಿಗೆ ತೆರಳುತ್ತಿದ್ದ ಬಸ್ ಸೇತುವೆಯ ಬಳಿ ನಿಯಂತ್ರಣ ತಪ್ಪಿ ಸಿವಾನ್ ನದಿಯ ನೀರಿಲ್ಲದ ಒಣ ಪ್ರದೇಶದಲ್ಲಿ ಬಿದ್ದಿದೆ. ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಉಳಿದವರು ಹಜಾರಿಬಾಗ್ನ ಸದರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೋಥೆ ತಿಳಿಸಿದ್ದಾರೆ.
ದುರಂತದಲ್ಲಿ ಉಂಟಾದ ಜೀವಹಾನಿಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗಾಯಾಳುಗಳ ಶೀಘ್ರ ಚೇತರಿಕೆಗೆ ಅವರು ಪ್ರಾರ್ಥಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಡಿಎಸ್ಪಿ ಶ್ರೇಣಿಯ ಅಧಿಕಾರಿ ಮತ್ತು ಮೂರು ಪೊಲೀಸ್ ಠಾಣೆಯ ಉಸ್ತುವಾರಿಗಳನ್ನು ನಿಯೋಜಿಸಲಾಗಿದೆ.