ಅನಾಥ ಶವಗಳ ಅಂತ್ಯಸಂಸ್ಕಾರ ನೆರವೇರಿಸಿ ಸಮಾಜಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮೈಸೂರಿನ ಅಯೂಬ್ ಅಹ್ಮದ್ ಅವರಿಗೆ 2023ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ತನ್ವೀರ್ ಸೇಠ್ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಬರೆದು ವಿನಂತಿಸಿದ್ದಾರೆ.
ಮೈಸೂರಿನ ಎನ್. ಆರ್. ಮೊಹಲ್ಲಾ ಎ. ಜೆ. ಬ್ಲಾಕ್ ನಿವಾಸಿಯಾಗಿರುವ ಅಯೂಬ್, ಕಳೆದ 23 ವರ್ಷಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪೊಲೀಸರು, ಆಸ್ಪತ್ರೆ ಸಿಬ್ಬಂದಿ, ಸಾರ್ವಜನಿಕರು ಕರೆ ಮಾಡಿದರೆ ತಮ್ಮದೇ ಕಾರ್ನಲ್ಲಿ ತೆರಳುವ ಅಯೂಬ್, ಅನಾಥ ಶವಗಳನ್ನು ಆಯಾ ಸಂಪ್ರದಾಯದಂತೆ ಪೂಜೆ ನೆರವೇರಿಸಿ ಅಂತ್ಯಕ್ರಿಯೆ ನಡೆಸುತ್ತಾರೆ. ಅಲ್ಲದೇ ಟೈಲರಿಂಗ್ ಸಂಸ್ಥೆ ತೆರೆದಿರುವ ಅವರು ಬಡವರಿಗೆ ಉಚಿತ ಹೊಲಿಗೆ ತರಬೇತಿಯನ್ನೂ ನೀಡುತ್ತಿದ್ದಾರೆ. ಆಯೂಬ್ ಅವರಿಗೆ ಈಗಾಗಲೇ ಅಮೆರಿಕದ ಹಾರ್ಮೊನಿ ಇನ್ಸ್ಟಿಟ್ಯೂಟ್ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಲ್ಲದೇ ಎ.ಪಿ.ಜೆ.ಅಬ್ದುಲ್ ಕಲಾಂ ಗ್ಲೋಬಲ್ ಪೀಸ್ ಅವಾರ್ಡ್ ಹಾಗೂ 2017ರ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೂ ಅಯೂಬ್ ಅವರಿಗೆ ಲಭಿಸಿದೆ.
ಈಗ ಆಯೂಬ್ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಬೇಕೆಂದು ಕೋರಿರುವ ಸಂಸದ ಪ್ರತಾಪ್ ಸಿಂಹ, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಇನ್ನು ಕೊರೋನಾ ದಾಳಿ ಇಟ್ಟ ಸಂದರ್ಭದಲ್ಲೂ ಆಯೂಬ್ ಸುಮಾರು 6,000 ಮಂದಿಯನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ್ದರು. ಈ ಮೂಲಕ ಅವರ ಜೀವ ಉಳಿಸಲು ನೆರವಾಗಿದ್ದರು. ಅವರ ಸಾಧನೆಯನ್ನು ಹಲವರು ಗೌರವಿಸಿದ್ರು.