ಕೂಗು ನಿಮ್ಮದು ಧ್ವನಿ ನಮ್ಮದು

ಬಿಎಸ್ವೈ, ಕುಟುಂಬಕ್ಕೆ ಹೈಕೋರ್ಟ್ ಆದೇಶದಿಂದ ಮತ್ತೆ ಸಂಕಷ್ಟ!

ಬೆಂಗಳೂರು: ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ ಬಂದೊದಗಿದೆ. ಹೌದು ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಮರು ವಿಚಾರಣೆಗೆ ಹೈಕೋರ್ಟ್ ಆದೇಶ ನೀಡಿದೆ. ಈ ಹಿಂದೆ ಪ್ರಾಸಿಕ್ಯೂಷನ್ಗೆ ಪೂರ್ವಾನುಮತಿ ಸಿಗದ ಕಾರಣ ಈ ಕೇಸ್ ವಜಾಗೊಂಡಿದ್ದು, ಮಾಜಿ ಸಿಎಂಗೆ ಕೊಂಚ ನೆಮ್ಮದಿ ಕೊಟ್ಟಿತ್ತು. ಆದರೀಗ ಹೈಕೋರ್ಟ್ ವಿಚಾರಣಾ ಕೋರ್ಟ್ ಹಿಂದಿನ ವಜಾ ಆದೇಶ ರದ್ದುಪಡಿಸಿ, ಪ್ರಕರಣ ಮರು ವಿಚಾರಣೆಗೆ ಆದೇಶಿಸಿದೆ.

ಯಾರೆಲ್ಲರ ವಿರುದ್ಧ ಕೇಸ್? ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಅವರ ಪುತ್ರ ಬಿ. ವೈ. ವಿಜಯೇಂದ್ರ,‌ ಶಶಿಧರ ಮರಡಿ, ಸಂಜಯ್ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್. ಟಿ. ಸೋಮಶೇಖರ್, ಡಾ. ಜಿ. ಸಿ. ಪ್ರಕಾಶ್, ಕೆ. ರವಿ, ವಿರುಪಾಕ್ಷಪ್ಪ ಯಮಕನಮರಡಿ ಇವರೆಲ್ಲರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಕೇಸ್ ದಾಖಲಾಗಿತ್ತು. ಟಿ. ಜೆ. ಅಬ್ರಹಾಂ ಈ ಒಂದು ದೂರಿನ ಅರ್ಜಿ ಸಲ್ಲಿಸಿದ್ದು, ಅಮಿಕಸ್ ಕ್ಯೂರಿಯಾಗಿ ವೆಂಕಟೇಶ್ ಅರಬಟ್ಟಿ ವಾದಿಸಿದ್ದರು.

ಇನ್ನು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿ ಹೈಕೋರ್ಟ್ಗೆ ಬಿಎಸ್ವೈ ಪರ ವಕೀಲ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ. ಕಾಲಾವಕಾಶದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಮಾನಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಪರ ವಕೀಲರಿಗೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿದೆ.

ಏನಿದು ಪ್ರಕರಣ?
ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಹಾಗೂ ಈ ಬಗ್ಗೆ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ಕೊಡುವಂತೆ ಟಿ.ಜೆ.ಅಬ್ರಹಾಂ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಈ ಹಿಂದೆ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿರುವ ಕಾರಣ ಈ ಅರ್ಜಿಯನ್ನು ಪಿಐಎಲ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿತ್ತು.

ಅಲ್ಲದೇ ಅರ್ಜಿಯನ್ನು ಮಾರ್ಪಡಿಸಿ ಸೂಕ್ತ ಪೀಠಕ್ಕೆ ವರ್ಗಾಯಿಸಲು ರಿಜಿಸ್ಟ್ರಾರ್ ಜನರಲ್‌ರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಿಸಿದ್ದರಿಂದ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಈ ಎಲ್ಲಾ ಕಾರಣಗಳಿಂದ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.

error: Content is protected !!