ಕೂಗು ನಿಮ್ಮದು ಧ್ವನಿ ನಮ್ಮದು

ಕಿಲ್ಲರ್ ಕೊರೋನಾ ತೊಲಗಿಸಲು ಕೈಜೋಡಿಸಿ : ಬೈಕ್ ಮೇಲೆ ನಗರ ಸುತ್ತಾಡಿ ಸಾರ್ವಜನಿಕರಿಗೆ ಮನವಿ ಮಾಡಿದ ಸಚಿವ ರಮೇಶ್ ಜಾರಕಿಹೊಳಿ

ಗೋಕಾಕ್: ಇಡಿ ಪ್ರಪಂಚದಲ್ಲಿ ಕೊರೋನಾ ಹೆಸರಿನ ಕಿಲ್ಲರ್ ವೈರಸ್ ಮರಣ ಮೃದಂಗವನ್ನು ಬಾರಿಸುತ್ತಿದೆ. ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಭಾರತ ಅವೀರತ ಪ್ರಯತ್ನದಲ್ಲಿ ತೊಡಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ 21 ದಿನಗಳ ಲಾಕ್ ಡೌನ್ ಗೆ ಕರೆ ಕೊಟ್ಟಿದ್ದಾರೆ. ಆದ್ರೆ ನಮ್ಮ ಜನತೆ ಮಾತ್ರ ಲಾಕ್ ಡೌನ್ ಗೆ ಕ್ಯಾರೆ ಎನ್ನುತ್ತಿಲ್ಲ. ಹೀಗೆ ಲಾಕ್ ಡೌನ್ ಉಲ್ಲಂಘಿಸಿ ಮನೆಯಿಂದ ಹೊರ ಬಂದವರಿಗೆ ಗೋಕಾಕ್ ಸಾಹುಕಾರ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೈ ಮುಗಿದು ಮನವಿ ಮಾಡಿದ್ದಾರೆ. ಗೋಕಾಕ್ ನಗರಸಭೆ ಸದಸ್ಯ ಕೊತ್ವಾಲ್ ಅವರ ಜೊತೆ ಬೈಕ್ ಮೇಲೆ ಗೋಕಾಕ್ ನಗರ ಪ್ರದಕ್ಷಿಣೆ ಹಾಕಿದ ಸಚಿವ ರಮೇಶ್ ಜಾರಕಿಹೊಳಿ, ಮನೆಯಿಂದ ಯಾರೂ ಹೊರಬರದಂತೆ ಸಾರ್ವಜನಿಕರಲ್ಲಿ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಮುಂದಿನ ಮೂರು ವಾರಗಳ ಕಾಲ ಯಾರು ಮನೆಯಿಂದ ಹೊರಬರಬೇಡಿ. ಈ ಮೂರು ವಾರಗಳ ಕಾಲ ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡರೆ ಈ ಮಹಾಮಾರಿ ಕೊರೋನಾ ವನ್ನ ತೊಲಗಿಸಲು ಪ್ರಧಾನಿ ನರೇಂದ್ರ ಮೋದಿ ಯವರೊಂದಿಗೆ ಕೈ ಜೋಡಿಸಿದಂತಾಗುತ್ತದೆ ಎಂದು ಕೇಳಿಕೊಂಡಿದ್ದಾರೆ. ಸಚಿವರು ತಮ್ಮ ಸರ್ಕಾರಿ ವಾಹನ ಬಿಟ್ಟು, ಯಾವುದೇ ಎಸ್ಕಾರ್ಟ್ ಇಲ್ಲದೇ ಗೋಕಾಕ್ ನಗರದಾದ್ಯಂತ ಸಾಮಾನ್ಯರಂತೆ ಬೈಕ್ ಮೇಲೆ ಸುತ್ತಾಡಿ ಕೊರೊನಾ ಮಹಾಮಾರಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ನಂತರ ನಗರದಲ್ಲಿ ಲಾಕ್ ಡೌನ್ ಸ್ಥಿತಿಗತಿ ಬಗ್ಗೆ ಹಾಗೂ ಗೋಕಾಕ್ ನಗರ ಸೇರಿದಂತೆ ತಾಲೂಕಿನಾದ್ಯಂತ ಕೊರೋನಾ ಕುರಿತು ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಗರಸಭೆ, ಪುರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು. ಸಾಮಾಜಿಕ ಅಂತರದಡಿ ಸಭೆ ನಡೆಸಿ ಮಾಹಿತಿ ಪಡೆದ ಸಚಿವ ರಮೇಶ್ ಜಾರಕಿಹೊಳಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅವರಿಗೆ ಯಾವುದೇ ಅನಾನುಕೂಲ ವಾಗದಂತೆ ಹಾಲು, ತರಕಾರಿ, ದಿನಸಿ ವಸ್ತುಗಳು ಯೋಗ್ಯ ದರದಲ್ಲಿ ಸಿಗುವಂತೆ ಮುಂಜಾಗೃತೆ ವಹಿಸುವುದಲ್ಲದೇ ಅಂತ್ಯೋದಯ, ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರ ಸೂಚಿಸಿರುವ ಪ್ರಮಾಣದಲ್ಲಿ ಪಡೀತರ ವಿತರಿಸಲು ಕ್ರಮ ವಹಿಸುವಂತೆ ಗೋಕಾಕ್ ತಹಸಿಲ್ದಾರಗೆ ಸೂಚನೆ ನೀಡಿದ್ರು. ಅಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೂ ಸೂಚನೆ ನೀಡಿದ ಸಚಿವರು, ಎಲ್ಲಾ ಸಾರ್ವಜನಿಕರು ತಮ್ಮ ಮನೆಯಲ್ಲೇ ಇರುವಂತೆ ಮತ್ತು ಅಗತ್ಯ ವಸ್ತುಗಳ ಖರಿದಿಗೆ ಹೋದಾಗ ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ಯಶಸ್ವಿಗೊಳಿಸಲು ಮನವಿ ಮಾಡಿದರು.

error: Content is protected !!