ಬೆಳಗಾವಿ: ಪ್ರಸ್ತುತ ದೇಶದಲ್ಲಿ ಕೋವಿಡ-19 ನಿಮಿತ್ಯ ಲಾಕ್ ಡೌನ್ ಇರುವದರಿಂದ ಜಿಲ್ಲೆಯ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವ ಹಾಗೂ ಈಗಾಗಲೇ ಸರ್ಕಾರವು ಘೋಷಿಸಿರುವಂತೆ ಎಪ್ರೀಲ್ ಮತ್ತು ಮೇ-2020ನೇ ಮಾಹೆಗಳಿಗೆ ಒಟ್ಟಿಗೆ ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿ ಎಪ್ರೀಲ್ ಮತ್ತು ಮೇ-2020 ಎರಡು ಮಾಹೆಗಳ ಸೇರಿ 70 ಕೆ.ಜಿ ಅಕ್ಕಿ ಮತ್ತು ಆದ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿ ಘಟಕಕ್ಕೆ, ಎಪ್ರೀಲ್ ಮತ್ತು ಮೇ-2020 ಎರಡು ಮಾಹೆಗಳ ಸೇರಿ 10 ಕೆಜಿ ಪ್ರತಿ ಕಾರ್ಡಿಗೆ/ ಕುಟುಂಬಕ್ಕೆ ನೀಡಲಾಗುವುದು. ಅದೇ ರೀತಿ ಆದ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿ ಘಟಕಕ್ಕೆ, ಎಪ್ರೀಲ್ ಮತ್ತು ಮೇ-2020 ಎರಡು ಮಾಹೆಗಳ ಸೇರಿ 4 ಕೆಜಿ ಗೋಧಿ ನೀಡಲಾಗುವುದು. ಈ ಮೇಲೆ ನಮೂದಿಸಿದ ವಿತರಣಾ ಪ್ರಮಾಣದಂತೆ ಸರ್ಕಾರವು ಎಪ್ರೀಲ್ ಮತ್ತು ಮೇ-2020ನೇ ಮಾಹೆಗಳಿಗೆ ಜಂಟಿಯಾಗಿ ಉಚಿತವಾಗಿ ವಿತರಿಸಲು ಬಿಡುಗಡೆ ಮಾಡಿರುತ್ತದೆ. ಇನ್ನು ಜಿಲ್ಲೆಯಾದ್ಯಂತ ಇರುವ ನ್ಯಾಯಬೆಲೆ ಅಂಗಡಿಕಾರರು ಬೆಳಿಗ್ಗೆ 7-00 ಗಂಟೆಯಿಂದ ಮಧ್ಯಾಹ್ನ 12-00 ಹಾಗೂ ಮಧ್ಯಾಹ್ನ 4-00 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆ ಕಾರ್ಯವನ್ನು ಸಾಮಾಜಿಕ ಅಂತರ ಹಾಗೂ ಕೋವಿಡ್-19 ನಿಮಿತ್ಯ ವಹಿಸಬೇಕಾಗಿರುವ ಎಲ್ಲ ಮುನ್ನೆಚ್ಚರಿಕೆ ವಹಿಸುವ ಮೂಲಕ ಪಡಿತರ ವಿತರಿಸಲು ಕ್ರಮವಹಿಸಬೇಕು. ಪ್ರತಿ ಮಂಗಳವಾರ ರಜೆಯ ದಿನ ಮತ್ತು ರಾಷ್ಟ್ರೀಯ ರಜೆಯ ದಿನಗಳನ್ನು ಹೊರತುಪಡಿಸಿ ಪಡಿತರ ವಿತರಣೆಯನ್ನು ತಿಂಗಳ ಪೂರ್ತಿ ಮಾಡಬೇಕು. ಪಡಿತರ ಚೀಟಿದಾರರಿಗೆ ಯಾವುದೇ ರೀತಿಯಾಗಿ ನ್ಯಾಯಬೆಲೆ ಅಂಗಡಿಕಾರರಿಂದ ತೊಂದರೆಯಾದಲ್ಲಿ 1967 ಟೋಲ್ ಫ್ರಿ ಸಂಖ್ಯೆಗೆ ಕರೆ ಮಾಡಿ ದೂರನ್ನು ದಾಖಲಿಸತಕ್ಕದ್ದು ಮತ್ತು ಜಿಲ್ಲೆಯ ನ್ಯಾಯಬೆಲೆ ಅಂಗಡಿಕಾರರು ಸರ್ಕಾರ ನೀಡುತ್ತಿರುವ ಪಡಿತರ ವಸ್ತುಗಳನ್ನು ಹೊರತುಪಡಸಿ ಬೇರೆ ವಸ್ತುಗಳನ್ನು ವಿತರಣೆ ಮಾಡತಕ್ಕದ್ದಲ್ಲ. ಯಾವುದೇ ಕಾರಣಕ್ಕೂ ಪ್ರತಿ ಪಡಿತರ ಚೀಟಿದಾರರಿಂದ ಸಬೂಬು ಹೇಳಿ ಇಂಟರ್ನೆಟ್ ಮತ್ತಿತರ ವೆಚ್ಚವನ್ನು ವಸೂಲಿ ಮಾಡತಕ್ಕದ್ದಲ್ಲ. ಒಂದು ವೇಳೆ ಈ ರೀತಿ ದೂರುಗಳು ಬಂದಲ್ಲಿ ಆಯಾ ತಾಲ್ಲೂಕಿನ ಕಾರ್ಯನಿರ್ವಾಹಕ ಸಿಬ್ಬಂದಿಗಳನ್ನೆ ನೇರ ಹೊಣೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದ್ದಾರೆ.