ತಲೆಗೂದಲಿಗೆ ಪ್ರತಿ ಸೀಸನಲ್ಲಿ ಬೇರೆ ಬೇರೆ ಬಗೆಯ ಸಂರಕ್ಷಣೆ ಬೇಕಾಗುತ್ತದೆ. ನಾವೀಗ ಮಾನ್ಸೂನ್ ಸೀಸನಲ್ಲಿದ್ದೇವೆ. ಮಳೆಗಾಲದ ಹವಾಮಾನ ಮತ್ತು ಗಾಳಿಯಲ್ಲಿರುವ ತೇವಾಂಶ ನಿಮ್ಮ ತಲೆಗೂದಲಿಗೆ ಕೆಲ ಸಮಸ್ಯೆಗಳನ್ನು ತಂದೊಡ್ಡಬಹುದು. ಮಳೆಗಾಲದಲ್ಲಿ ಕೂದಲು ಹೆಚ್ಚು ಉದುರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ವಾತಾವರಣದಲ್ಲಿ ಅಧಿಕ ತೇವಾಂಶದಿಂದ ತಲೆ ಬುರುಡೆ ಎಣ್ಣೆಯುಕ್ತವಾಗುವುದರಿಂದ ಕೂದಲು ಉದುರುವಿಕೆಗೆ ಇದೇ ಪ್ರಮುಖ ಕಾರಣವಾಗುತ್ತದೆ. ಹಾಗಂತ ನೀವೇನೂ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಈ ಸಮಸ್ಯೆಗೆ ಕೆಲ ನೈಸರ್ಗಿಕ ಪರಿಹಾರಗಳಿವೆ.
ಬಿಸಿ ಎಣ್ಣೆ ಮಸಾಜ್: ನಿಮ್ಮ ಕೂದಲು ಸಂರಕ್ಷಣೆಗೆ ಅತ್ಯಂತ ಪರಿಣಾಮಕಾರಿ ವಸ್ತು ಎಂದರೆ ಹೇರ್ ಆಯಿಲ್ ಕೂದಲು ಉದುರುವುದನ್ನು ತಡೆಯಬೇಕೆಂದರೆ ಒಂದು ಬಟ್ಟಲಿನಲ್ಲಿ ಒಂದಷ್ಟು ಕೊಬ್ಬರಿ ಎಣ್ಣೆ ತೆಗೆದುಕೊಂಡು ಕಾಯಿಸಿರಿ. ನಂತರ ಅದು ಉಗುರು ಬೆಚ್ಚಗಾಗುವರೆಗೆ ಕಾಯ್ದು ಅದರಿಂದ ತಲೆ ಮಸಾಜ್ ಮಾಡಿಕೊಳ್ಳಿ. ಹಾಗೆ ಮಾಡುವುದರಿಂದ ತಲೆ ಬುರುಡೆ ಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗಿ ಎಣ್ಣೆ ನಿಮ್ಮ ಕೂದಲಿನ ಬೇರಿನ ಭಾಗ ತಲುಪುವುದು ಸಾಧ್ಯವಾಗುತ್ತದೆ. ಹಾಗಾದಾಗ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಮೆಂತೆ ಮತ್ತು ಸೋಂಪು ಕಾಳುಗಳ ಹೇರ್ ಪ್ಯಾಕ್: ಬುರುಡೆಯಲ್ಲಿ ಹೊಸ ಕೂದಲಿನ ಬೆಳವಣಿಗೆಗೆ ಮೆಂತೆ ಮತ್ತು ಸೋಂಪು ಕಾಳುಗಳು ಬಹಳ ಪ್ರಯೋಜನಕಾರಿಯಾಗಿವೆ. ಈ ಎರಡು ಕಾಳುಗಳ ಮಿಶ್ರಣ ತಯಾರಿಸಿ ಹೇರ್ ಪ್ಯಾಕ್ ಆಗಿ ಬಳಸಲು ನೀವು ಮಾಡಬೇಕಿರುವುದು ಇಷ್ಟು: ಅವರೆಡನ್ನೂ ರಾತ್ರಿಯೆಲ್ಲ ನೆನೆಯಿಟ್ಟು ಬೆಳಗಿನ ಸಮಯದಲ್ಲಿ ಮಿಕ್ಸರ್ ನಲ್ಲಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
ನಂತರ ಆ ಪೇಸ್ಟನ್ನು ನಿಮ್ಮ ತಲೆಬುರುಡೆ ಮತ್ತು ಕೂದಲಿಗೆ ಹಚ್ಚಿರಿ. ಅರ್ಧಗಂಟೆಯ ನಂತರ ಕೂದಲು ಮತ್ತು ಬರುಡೆಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಉತ್ತಮ ಮತ್ತು ತ್ವರಿತ ಫಲಿತಾಂಶಗಳಿಗಾಗಿ ಹೀಗೆ ವಾರಕ್ಕೆರಡು ಸಲ ಮಾಡಿ.
ಗಿಡಮೂಲಿಕೆಗಳ ಹೇರ್ ಪ್ಯಾಕ್: ಕೂದಲು ಉದರುವುದನ್ನು ತಡೆಯಲು ಇದು ನಿಸ್ಸಂದೇಹವಾಗಿ ಅತ್ಯುತ್ತಮ ಉಪಾಯ. ಇದನ್ನು ತಯಾರಿಸಿಕೊಳ್ಳಲು ನಿಮಗೆ ಬೇಕಿರುವುದು ಲೋಳೆ ರಸ ಕರಿಬೇವಿನ ಎಲೆಗಳು, ನೆಲ್ಲಿಕಾಯಿ, ಮೆಂತೆ ಕಾಳು ಮತ್ತು ದಾಸವಾಳ ಹೂವು. ಇವೆಲ್ಲವನ್ನು ಮಿಕ್ಸರ್ ನಲ್ಲಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಅದನ್ನು ತಲೆಗೆ ಚೆನ್ನಾಗಿ ಹಚ್ಚಿಕೊಂಡು 40 ನಿಮಿಷಗಳ ನಂತರ ಸ್ನಾನ ಮಾಡಿ. ಈ ಮಿಶ್ರಣ ನಿಮ್ಮ ತಲೆಗೂದಲನ್ನು ಆರೋಗ್ಯವಾಗಿಡುತ್ತದೆ ಮತ್ತು ಪಿಎಚ್ ಕಾಯ್ದುಕೊಳ್ಳಲು ನೆರವಾಗುತ್ತದೆ. ವಾರಕ್ಕೊಮ್ಮೆ ಇದನ್ನು ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ತಲೆಗೂದಲು ಸಂರಕ್ಷಣೆಗೆ ಮನೆ ಉಪಾಯಗಳ ಜೊತೆ ಆಹಾರ ಮತ್ತು ಜೀವನ ಶೈಲಿಯ ಕಡೆಯೂ ಗಮನ ನೀಡಬೇಕಾಗುತ್ತದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವಂತೆ ತಲೆಗೂದಲಿನ ಸಂರಕ್ಷಣೆಗೆ ಪೌಷ್ಠಿಕಾಂಶಭರಿತ ಆಹಾರ, ಮತ್ತು ಉತ್ತಮ ಜೀವನಶೈಲಿ ಅತ್ಯಗತ್ಯ. ಯೋಗ ಮತ್ತು ಪ್ರಾಣಯಾಮಗಳ ಮೂಲಕವೂ ಕೂದಲು ಉದುರುವುದನ್ನು ನಿಯಂತ್ರಿಸಬಹುದು