ನವದೆಹಲಿ: ಮಧ್ಯರಾತ್ರಿ, ಮದ್ಯ ಸೇವಿಸಿ ಆ ಅಮಲಿನಲ್ಲಿ ಸಿಎಂ ಬದಲಾಗುತ್ತಾರೆ ಎಂದು ಕಾಂಗ್ರೆಸ್ ಐಟಿ ಸೆಲ್ ಟ್ವೀಟ್ ಮಾಡಿ ಕೈಸುಟ್ಟುಕೊಂಡಿದೆ ಎಂದು ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ರು. ನವದೆಹಲಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಒಡೆದ ಮನೆ ಎಂದು ಕುಟುಕಿದರು. ರಾಜ್ಯದಲ್ಲಿ ಸಿಎಂ ಬದಲಾವಣೆ ಸುದ್ದಿ ಜೋರಾಗುತ್ತಿದ್ದಂತೆ ವರಿಷ್ಠರನ್ನು ಭೇಟಿ ಮಾಡಲು ಅವರು ದೆಹಲಿಗೆ ತೆರಳಿದ್ದರು. ಇಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ರು.
ಭೇಟಿ ಬಳಿಕ ಮಾತನಾಡಿದ ಅವರು, ಅರುಣ್ ಸಿಂಗ್, ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದೇನೆ. ಸಿಎಂ ಬದಲಾವಣೆ ವಿಚಾರ, ಪ್ರವೀಣ್ ನೆಟ್ಟಾರು ಹತ್ಯೆ, ಮುಂಬರುವ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದೇನೆ. ಸದ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಇಲ್ಲ ಎಂದು ಹೇಳಿದರು.
ಸಚಿವ ಸ್ಥಾನದ ಆಕಾಂಕ್ಷಿಯೂ ನಾನಲ್ಲ, ನಾನು ಸಂಪುಟ ಸೇರಲು ಪ್ರಯತ್ನ ಮಾಡುತ್ತಿಲ್ಲ. ಅದಕ್ಕಾಗಿ ನಾನು ಸಿಎಂ ಪರವಾಗಿ ಮಾತನಾಡಲು ದೆಹಲಿಗೆ ಬಂದಿಲ್ಲ. ಅಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ. ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ದಾವಣಗೆರೆಯಲ್ಲಿ ಸಮಾವೇಶ ನಡೆಸುವ ಬಗ್ಗೆಯೂ ಚರ್ಚೆ ಮಾಡಿದ್ದೇನೆ. ದಿನಾಂಕ ನೀಡುವಂತೆ ವರಿಷ್ಠರಿಗೆ ಕೇಳಿದ್ದೇವೆ, ಸಮಯ ನೀಡುವ ಭರವಸೆ ನೀಡಿದರು. ಸಿದ್ದರಾಮಯ್ಯ ಸಮಾವೇಶದ ಬದಲಿಗೆ ನಾವು ಸಮಾವೇಶ ಮಾಡುತ್ತಿಲ್ಲ. ನಮ್ಮ ಸಿದ್ದರಾಮಯ್ಯ ಅವರ ಗೌರವ ಇದೆ, ಭಯ ಇಲ್ಲ.
ಅಮೃತ ಮಹೋತ್ಸವಕ್ಕೆ ಬಂದಿದ್ದು, ಸಿದ್ದರಾಮಯ್ಯ ಅಭಿಮಾನಿಗಳು, ಅವರ್ಯಾರು ಕಾಂಗ್ರೆಸ್ ಮತದಾರರು ಅಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸದ್ಯ ಕಾಂಗ್ರೆಸ್ ಮನೆಗೆ ಬೆಂಕಿ ಬಿದ್ದಿದೆ. ಸಿಎಂ ಬದಲಾವಣೆ ಟ್ವೀಟ್ ಬಗ್ಗೆ ಸಿದ್ದರಾಮಯ್ಯ ಅವರು ಮಾಹಿತಿ ಇಲ್ಲ ಅಂತಾರೆ. ಆದರೆ ಡಿ.ಕೆ. ಶಿವಕುಮಾರ್ 3 ದಿನ ಬಿಟ್ಟು ಹೇಳತ್ತೇನೆ ಎನ್ನುತ್ತಾರೆ. ಕಾಂಗ್ರೆಸ್ನಲ್ಲಿ ಒಡಕಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು