ಕೂಗು ನಿಮ್ಮದು ಧ್ವನಿ ನಮ್ಮದು

ಬೊಮ್ಮಾಯಿಯವರ ಸಾಧನೆ ಕಾಂಗ್ರೆಸ್‌ಗೆ ಅಜೀರ್ಣ: ಸಿ.ಸಿ ಪಾಟೀಲ್

ಬೆಂಗಳೂರು: ಕಾಂಗ್ರೆಸ್ ಪಕ್ಷವು ರಚನಾತ್ಮಕ ವಿರೋಧಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು ಪ್ರಸ್ತುತ ಮುಖ್ಯಮಂತ್ರಿಗಳು ಬದಲಾಗುತ್ತಾರೆ ಎಂದು ಕಪೋಲಕಲ್ಪಿತವಾಗಿ ವದಂತಿ ಹಬ್ಬಿಸುವಲ್ಲಿ ನಿರತವಾಗಿದೆ. ಇದು ಆ ಪಕ್ಷದ ಹತಾಶೆಯನ್ನು ತೋರಿಸುತ್ತದೆ ಎಂದು ಸಚಿವ ಸಿ.ಸಿ ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿಗಳನ್ನು ಪದೇ ಪದೇ ತಮಗಿಷ್ಟ ಬಂದಂತೆ ಬದಲಾಯಿಸುವ ಚಾಳಿ ಇರುವುದು ಕಾಂಗ್ರೆಸ್‌ನ ಹೈಕಮಾಂಡ್‌ನಲ್ಲಿ ಎಂಬುದನ್ನು ಕಾಂಗ್ರೆಸ್ಸಿಗರು ಮೊದಲು ನೆನಪು ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ. ಜನಪರ ಆಡಳಿತ ನೀಡುತ್ತಾ ಒಂದು ವರ್ಷದ ಆಡಳಿತವನ್ನು ಬೊಮ್ಮಾಯಿ ಅವರು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ, ಮುಂದೆಯೂ ಅವರು ಸುಭದ್ರ ಸರ್ಕಾರವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಬಗ್ಗೆ ಕಾಂಗ್ರೆಸ್ಸಿಗರಿಗೆ ಹಗಲುಗನಸು ಬೇಡ. ಸನ್ಮಾನ್ಯ ಬೊಮ್ಮಾಯಿಯವರು ರಾಜ್ಯವನ್ನು ಸಮರ್ಥವಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವುದರಿಂದ ಈಗ ನಾಯಕತ್ವದ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಮುಂದಿನ 2023ರ ವಿಧಾನಸಭಾ ಚುನಾವಣೆಯನ್ನೂ ನಾವು ಎದುರಿಸಲಿದ್ದೇವೆ. ಯಾವುದೇ ಕಾರಣಕ್ಕೂ ನಾಯಕತ್ವದ ಬದಲಾವಣೆಯಿಲ್ಲ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಕಾಂಗ್ರೆಸ್ಸಿಗರ ಇಂತಹ ಗಾಳಿ ಮಾತನ್ನು ಮತ್ತು ವದಂತಿಗಳನ್ನು ಜನ ನಂಬುವುದಿಲ್ಲ. ಕಾಂಗ್ರೆಸ್ಸಿಗರು ಮೊದಲು ಆ ಪಕ್ಷದಲ್ಲಿರುವ ನಾಯಕತ್ವದ ಗುಂಪುಗಾರಿಕೆ ಮತ್ತು ಭಿನ್ನಮತವನ್ನು ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

error: Content is protected !!