ಕೂಗು ನಿಮ್ಮದು ಧ್ವನಿ ನಮ್ಮದು

ಭಾರೀ ಮಳೆಗೆ ಕಳಸ, ಹೊರನಾಡು ಸಂಪರ್ಕ ಕಡಿತ, ಬೆಳ್ತಂಗಡಿ ಶಾಲಾ, ಕಾಲೇಜುಗಳಿಗೆ ರಜೆ

ಚಿಕ್ಕಮಗಳೂರು: ಕಾಫಿನಾಡಿನ ಕುದುರೆಮುಖ ಸುತ್ತಮುತ್ತ ಕಳೆದ ರಾತ್ರಿಯಿಡೀ ಮಳೆ ಸುರಿದ ಪರಿಣಾಮ. ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ಕಳಸದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಕಳಸ-ಹೊರನಾಡು ದೇವಸ್ಥಾನದ ರಸ್ತೆ ಸಂಪರ್ಕ ಕಡಿತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಪ್ರತಿ ಮಳೆಗಾಲದಲ್ಲೂ ಮುಳುಗಡೆಯಾಗುತ್ತದೆಯಾದರೂ ಈ ಬಾರಿ ಅಪಾಯದ ಮಟ್ಟ ಮೀರಿ ಭದ್ರಾ ನದಿ ಹರಿಯುತ್ತಿದೆ.

ಈ ವರ್ಷದಲ್ಲಿ ಮೊದಲ ಬಾರಿ ಮುಳುಗಡೆಯಾಗಿರುವ ಹೆಬ್ಬಾಳೆ ಸೇತುವೆ ಮೇಲೆ 2 ಅಡಿಯಷ್ಟು ಎತ್ತರಕ್ಕೆ ನೀರು ಹರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಇಂದು ಮುಂಜಾನೆಯಿಂದಲೇ ಮಳೆಯಾಗುತ್ತಿದೆ. ಮಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಜಿಟಿಜಿಟಿ ಮಳೆಯಾಗಿದೆ. ಆದರೆ ಬೆಳ್ತಂಗಡಿ ತಾಲೂಕಿನಾದ್ಯಂತ ರಾತ್ರಿ ಇಡೀ ಮಳೆಯಾಗಿದ್ದು, ಇಂದು ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ರಜೆ ಘೋಷಣೆ ಮಾಡಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಮಾತ್ರವೇ ಸದ್ಯ ಅಂಗನವಾಡಿಯಿಂದ ಡಿಗ್ರಿ ಕಾಲೇಜುವರೆಗೆ ರಜೆ ಘೋಷಣೆ ಮಾಡಲಾಗಿದ್ದು, ಇನ್ನುಳಿದ ಎಲ್ಲಾ ತಾಲೂಕಿನಲ್ಲೂ ಶಾಲಾ ಕಾಲೇಜು ಎಂದಿನಂತೆ ನಡೆಯಲಿದೆ. ಸುಳ್ಯ ಹಾಗೂ ಪುತ್ತೂರು ತಾಲೂಕಿನಲ್ಲೂ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಮಂಗಳವಾರದವರೆಗೂ ಆರೆಂಜ್ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

error: Content is protected !!