ಬೆಳಗಾವಿ: ಅಗ್ನಿಪಥ್ ಯೋಜನೆ ವಿರೋಧಿಸಿ ಇಂದು ಬೆಳಗಾವಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲಾ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.
ವಾಟ್ಸಪ್ ಮೂಲಕ ಪ್ರತಿಭಟನೆಗೆ ಸೇನಾಕಾಂಕ್ಷಿಗಳಿಗೆ ಆಹ್ವಾನ ನೀಡಿದ ಹಿನ್ನೆಲೆ, ಸಾಮಾಜಿಕ ಜಾಲತಾಣಗಳ ಮೇಲೂ ಪೊಲೀಸರು ಹದ್ದಿಣ ಕಣ್ಣು ಇಟ್ಟಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಬಂದ್ ಕುರಿತು ಸಂದೇಶ ರವಾನೆ ಮಾಡಿದ್ದ ಯುವಕರನ್ನು ಕರೆಯಿಸಿ ಖಡಕ್ ವಾರ್ನಿಂಗ್ ಮಾಡಲಾಗಿದೆ. ಸೇನಾಕಾಂಕ್ಷಿಗಳು, ಕೋಚಿಂಗ್ ಸೆಂಟರ್ ಮುಖ್ಯಸ್ಥರಿಂದ ಬಂದ್ ಮಾಡದಂತೆ ಮನವಿ ಮಾಡಿದ ವಿಡಿಯೋ ಹೇಳಿಕೆಯನ್ನು ಕೂಡ ಈಗಾಗಲೇ ರಿಲೀಸ್ ಮಾಡಲಾಗಿದ್ದು, ಈ ಎಲ್ಲರೂ ಬಂದ್ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ಉಳಿದಂತೆ ಬಸ್ ನಿಲ್ದಾಣ, ರೈಲು ನಿಲ್ದಾಣ, ಟೋಲ್ ಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಳಗಾವಿಗೆ ತೆರಳುತ್ತಿರುವ ಯುವಕರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಅಲರ್ಟ್ ಘೋಷಿಸಲಾಗಿದೆ. ಯಾರಾದರೂ ಅನುಮತಿ ಇಲ್ಲದೇ ಪ್ರತಿಭಟನೆ ನಡೆಸಿದ್ರೆ ಕ್ರಿಮಿನಲ್ ಕೇಸ್ ಹಾಕುವ ಎಚ್ಚರಿಕೆ ನೀಡಲಾಗಿದ್ದು, ಈ ಬಗ್ಗೆ ಪೊಲೀಸರು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಹಾಗೂ ಬೆಳಗಾವಿ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಗ್ನಿಪಥ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ ಕರೆ ನೀಡಿದ ಬೆನ್ನಲ್ಲೇ ಕುಂದಾನಗರಿ ಬೆಳಗಾವಿಯಲ್ಲಿ ಜನಜೀವನ ಎಂದಿನಂತೆ ಸಾಗಿದೆ. ಇನ್ನು ನಗರ ಮತ್ತು ಜಿಲ್ಲಾ ಪೋಲಿಸರು ಕೈಯಲ್ಲಿ ಲಾಠಿ ಹಿಡಿದು ಬೆಳಿಗ್ಗೆಯಿಂದಲೇ ಬೆಳಗಾವಿ ನಗರ ಸೇರಿ ಜಿಲ್ಲೆಯಾದ್ಯಂತ ಬೀಗಿ ಭದ್ರತೆ ಕೈಗೊಂಡಿದ್ದಾರೆ.
ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಲಾಠಿ ಹಿಡಿದು ಖಾಕಿ ಸರ್ಪಗಾವಲು ಹಾಕಿದ್ದು, ಬೆಳಗಾವಿ ಪೊಲೀಸ್ ಕಮೀಷನರ್ ಡಾ.ಬೋರಲಿಂಗಯ್ಯಾ ಸಿಟಿ ರೌಂಡ್ಸ್ ನಲ್ಲಿ ತೊಡಗಿದ್ದಾರೆ. ಡಿಸಿಪಿ ರವೀಂದ್ರ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಒಂದು ಕೆಎಸ್. ಆರ್.ಪಿ, ಅಗ್ನಿ ಶಾಮಕ ತಂಡ, ಮೂವರು ಸಿಪಿಐ ಒಳಗೊಂಡ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಬೆಳಗಾವಿ ಚನ್ನಮ್ಮ ವೃತ್ತದಲ್ಲಿ Ak47 ರೈಫಲ್ ಹಿಡಿದು RAF (ರ್ಯಾಪಿಡ್ ಆ್ಯಕ್ಷನ್ ಫೋರ್ಸ್) ಸಿಬ್ಬಂದಿ ಸಜ್ಜಾಗಿ ನಿಂತಿದ್ದು, ಬೆಳಗಾವಿ ಚನ್ನಮ್ಮ ವೃತ್ತದಲ್ಲಿಯೇ ಎರಡು ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ತುಕಡಿ ನಿಯೋಜನೆ ಮಾಡಲಾಗಿದ್ದು, ಅಗ್ನಿ ಶಾಮಕ ವಾಹನದ ಜೊತೆಗೆ ಅಶ್ರುವಾಯು ದಳದ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.
ಬೆಳಗಾವಿಯ ಪ್ರಮುಖ ವೃತ್ತದಲ್ಲಿ ಖಾಕಿ ಸರ್ಪಗಾವಲು ಹಾಕಿದ್ದು, ಎಲ್ಲಿಯೂ ಯುವಕರ ಗುಂಪು ಸೇರದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಹತ್ತರಗಿ, ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲೂ ಬೀಗಿ ಭದ್ರತೆ ಕೈಗೊಳ್ಳಲಾಗಿದ್ದು, ಈ ಭದ್ರತೆಯ ಮಧ್ಯೆಯೂ ನೀವೆನಾದ್ರು ನುಸುಳಲು ಯತ್ನಿಸಿದರೇ ನಿಮ್ಮ ವಿರುದ್ದ ಕ್ರಿಮಿನಲ್ ಕೇಸಂತು ಗ್ಯಾರಂಟಿ.