ಬೆಳಗಾವಿ: ಮದುವೆಯಾದ ಏಳೇ ದಿನಕ್ಕೆ ಮದುಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಖಾನಾಪುರ ತಾಲೂಕಿನ ಲಕ್ಕೇಬೈಲ್ ಗ್ರಾಮದಲ್ಲಿ ನಡೆದಿದೆ. ದೇಮಪ್ಪ ಅರ್ಜುನ್ ಸನದಿ(23) ಮೃತ ಮದುಮಗ. ದೇಮಪ್ಪ ಕಳೆದ ವಾರವಷ್ಟೇ ತನ್ನ ಸೋದರತ್ತೆಯ ಮಗಳನ್ನು ಮದುವೆಯಾಗಿದ್ದ. ತನ್ನ ಸಂಬಂಧಿಕರ ಮನೆಗೆ ಹೋಗಿ ರಾತ್ರಿ ಮನೆಗೆ ಮರಳಿದ ಬಳಿಕ ತನ್ನ ಮಲಗುವ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಖಾನಾಪುರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ದೇಮಪ್ಪನ ಪತ್ನಿ ಹಾಗೂ ಆಕೆಯ ಪಾಲಕರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.