ಬೆಳಗಾವಿ: ಚಲಿಸುತ್ತಿದ್ದ ಲಾರಿ ಮತ್ತು ಬುಲೆರೊ ಪಿಕ್ ಅಪ್ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ತಾಯಿ ಮಗ ಸೇರಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರಿಗೆ ಗಾಯಗಳಾದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸೋಮನಟ್ಟಿ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಮೃತರನ್ನು ಕಡಬಿ ಶಿವಾಪುರ ಗ್ರಾಮದ ನಿವಾಸಿ ಲಕ್ಷ್ಮಿ ಕುಡದೊಳ್ಳಿ (30), ಮಗ ಕುಮಾರ್ ಕುಡದೊಳ್ಳಿ (8) ಮತ್ತು ಸೋಮನಟ್ಟಿ ಗ್ರಾಮದ ತುಳಜನ್ನವರ್ (35) ಗುರುತಿಸಲಾಗಿದೆ. ಯರಗಟ್ಟಿಯಿಂದ ಬೆಳಗಾವಿ ಕಡೆಗೆ ಆಗಮಿಸುತ್ತಿದ್ದ ಲಾರಿ ಹಾಗೂ ಬೆಳಗಾವಿ ಕಡೆಯಿಂದ ಯರಗಟ್ಟಿಯತ್ತ ತೆರಳುತ್ತಿದ್ದ ಬುಲೆರೋ ಮಧ್ಯೆ ಈ ಡಿಕ್ಕಿ ಸಂಭವಿಸಿದ್ದು, ಚಾಲಕರ ಅಜಾಗರೂಕತೆ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.