ಚಿಕ್ಕಮಗಳೂರು: ಬೂಟು ನೆಕ್ಕುವ ಕಲ್ಚರ್ ಇರುವುದು ಕಾಂಗ್ರೆಸ್ನಲ್ಲಿ. ಅಲ್ಲಿ ಅದು ಇದ್ದರೆ ಮಾತ್ರ ಉಳಿಯೋದು, ಸರ್ವೈವ್ ಆಗೋದು ಎಂದು ಸಿ.ಟಿ ರವಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ಗೆ ಟಾಂಗ್ ನೀಡಿದ್ರು.
ಸಿ.ಟಿ ರವಿ ಬಂಧನವಾಗಿದ್ದರೆ, ಪೊಲೀಸರ ಬೂಟು ನೆಕ್ಕುತ್ತಿದ್ದರು ಎಂದು ಹೇಳಿಕೆ ನೀಡಿದ ಬಿ.ವಿ ಶ್ರೀನಿವಾಸ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಹುಶಃ ಅವರಿಗೆ ನನ್ನ ಹಿನ್ನೆಲೆ ಗೊತ್ತಿಲ್ಲ. ಗುಲಾಮಗಿರಿಯ ಮಾನಸಿಕತೆಯಲ್ಲಿ ಇರುವವರು ಗುಲಾಮಗಿರಿಗೆ ಸೇರಿದವರು. ನಾನು ಗುಲಾಮಗಿರಿಯ ಮಾನಸಿಕತೆಯವನಲ್ಲ. ಚಿಕ್ಕಮಗಳೂರಿನಲ್ಲಿ ಓರ್ವ ಬಿಜೆಪಿ ಶಾಸಕ ಇಲ್ಲದ, ರಾಜ್ಯದಲ್ಲಿ ಕೇವಲ ಓರ್ವ ಬಿಜೆಪಿ ಶಾಸಕ ಇದ್ದ ಕಾಲದಲ್ಲಿ ನಾನು ಬಿಜೆಪಿ ಸೇರಿದ್ದು. ಜನ ಸಂಘಟನೆ, ಹೋರಾಟ ಮಾಡಿ ಶಾಸಕನಾಗಿದ್ದೇನೆ. ಯಾರದ್ದೋ ಬಕೆಟ್ ಹಿಡಿದು, ಚೇಲ ರಾಜಕಾರಣ ಮಾಡಿದವನಲ್ಲ ಎಂದರು.
ಬೂಟು ನೆಕ್ಕೋ ರಾಜಕಾರಣದ ಕಲ್ಚರ್ ಬಿಜೆಪಿಯಲ್ಲಿ ಇಲ್ಲ. ಬಿಜೆಪಿಯಲ್ಲಿ ಪಕ್ಷ ನಿಷ್ಠೆ, ಪರಿಶ್ರಮ ಇದ್ದರೆ ಎಷ್ಟು ಎತ್ತರಕ್ಕೆ ಬೇಕಾದರೂ ಬೆಳೆಯುತ್ತಾರೆ. ಆದರೆ ಕಾಂಗ್ರೆಸ್ನಲ್ಲಿ ಬೂಟು ನೆಕ್ಕೋ ಕಲ್ಚರ್ ಇದ್ದು, ಅದಿದ್ದರೆ ಮಾತ್ರ ಬೆಳೆಯೋದು, ಉಳಿಯೋದು, ಸರ್ವೈವ್ ಆಗೋದು ಎಂದು ಪ್ರತಿಕ್ರಿಯಿಸಿದರು. ಸ್ವಾತಂತ್ರ್ಯ ಪೂರ್ವ ಕಾಂಗ್ರೆಸ್ನ ಯಾವ ಮೌಲ್ಯಗಳನ್ನೂ ಇಂದಿನ ಕಾಂಗ್ರೆಸ್ ಉಳಿಸಿಕೊಂಡಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಮತಾಂತರದ ವಿರುದ್ಧ ಇದ್ದರು. ಗೋಹತ್ಯೆ ವಿರುದ್ಧ ಇದ್ದರು. ಇವತ್ತಿನ ಕಾಂಗ್ರೆಸ್ ಗೋಹತ್ಯೆ ಪರವಿದೆ. ಅದು ಅಕ್ರಮ ಗೋಹತ್ಯೆ ಪರ. ಅವರು ಬಂದು ಅಕ್ರಮ ಗೋಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳಲಿ. ಕಾನೂನು ತನ್ನ ಕೆಲಸವನ್ನು ತಾನು ಮಾಡುತ್ತದೆ ಎಂದರು.
ಕಾಂಗ್ರೆಸ್ ನೀತಿ ಭ್ರಷ್ಟಾಚಾರಿಗಳ ಪರ ನಿಲ್ಲುವುದು. ಕಾಂಗ್ರೆಸ್ ನೀತಿ ಮತಾಂತರಿಗಳ ಪರ ನಿಲ್ಲುವುದು. ಕಾಂಗ್ರೆಸ್ ನೀತಿ ಅಕ್ರಮ ಗೋಹತ್ಯೆ ಮಾಡುವವರ ಪರ ನಿಲ್ಲುವುದು ಎಂದು ಅವರು ಹೇಳಲಿ. ಆಗ ಬುಲ್ಡೋಜರ್ ಎದುರು ಅವರು ನಿಲ್ಲಲಿ. ಅವರ ಡಿಪಾಸಿಟ್ ಉತ್ತರ ಪ್ರದೇಶದಲ್ಲಿ ಹೇಗೆ ನಿಂತ ಕಡೆ ಎಲ್ಲಾ ಠೇವಣಿ ನಷ್ಟವಾಗಿದೆಯೋ ಇಲ್ಲೂ ಹಾಗೆ ಆಗುತ್ತದೆ.
ಎಂದು ಭವಿಷ್ಯ ನುಡಿದರು. ಕಾನೂನನ್ನು ಯಾರೇ ಕೈಗೆತ್ತಿಕೊಂಡರು ಯಾರು ಕಾನೂನು ಪಾಲಿಸುತ್ತಾರೆ ಅವರಿಗೆ ಕಾನೂನಿನ ಪಾಠ, ನಾಗರಿಕ ಪಾಠ. ಅನಾಗರಿಕರಂತೆ ವರ್ತಿಸಿ ಕಾನೂನು ಕೈಗೆತ್ತಿಕೊಳ್ಳುವವರನ್ನು, ಪ್ರತಿಭಟನೆ ನೆಪದಲ್ಲಿ ದಂಗೆ ಎಬ್ಬಿಸುವವರನ್ನು, ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡುವವರನ್ನು, ಕಾರು, ಬೈಕ್ ಸುಡುವವರನ್ನು, ಮಂದಿರಕ್ಕೆ ನುಗ್ಗಿ ವಿಗ್ರಹಗಳನ್ನು ಧ್ವಂಸ ಮಾಡುವವರನ್ನು ನಾಗರಿಕರು ಎಂದು ಪರಿಗಣಿಸಬೇಕಾ ಅಥವ ಅವರಿಗೆ ಅವರದ್ದೇ ಆದ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕಾ? ಸಭ್ಯರಿಗೆ ಸಭ್ಯತೆಯ ಪಾಠ. ಅನಾಗರಿಕರಿಗೆ ಅವರಿಗೆ ಅರ್ಥವಾಗುವ ದಂಡಂ ದಶಗುಣಂ ಎಂಬ ಭಾಷೆಯಲ್ಲೇ ಉತ್ತರ ಕೊಡಬೇಕು ಎಂದರು.