ಮೈಸೂರು: ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ನಗರದ ಪ್ರಮುಖ ರಸ್ತೆಯೊಂದರ ಸೇತುವೆಯೇ ನೀರಿನಲ್ಲಿ ಕೊಚ್ಚಿಹೋಗಿದೆ. ಮೈಸೂರಿನ ಹೊರವಲಯದಲ್ಲಿರುವ ಬೋಗಾದಿ ಕೆರೆ ತುಂಬಿ ಹರಿಯುತ್ತಿದೆ. ಇದರಿಂದ ರಿಂಗ್ ರಸ್ತೆಯಿಂದ ಅಮೃತಾನಂದಮಯಿ ವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯದ ಸೇತುವೆಯೇ ನೀರಿನಲ್ಲಿ ಕೊಚ್ಚಿಹೋಗಿದೆ. ಇಡೀ ರಸ್ತೆ ಕುಸಿತವಾಗಿದೆ.
ನಗರದಲ್ಲಿ ಬಿಟ್ಟೂ ಬಿಡದೇ ಸುರಿದ ಮಳೆಯಿಂದಾಗಿ ಬೋಗಾದಿ ಕೆರೆ ತುಂಬಿ ಹರಿಯುತ್ತಿದ್ದು, ವಿವಿಧ ಬಡಾವಣೆಗಳಿಗೆ ನೀರು ನುಗ್ಗಿದೆ. ಇಲ್ಲಿನ ಆನಂದ ನಗರವೂ ಅಕ್ಷರಶಃ ಜಲದಿಗ್ಬಂಧನಕ್ಕೆ ಒಳಗಾಗಿದೆ. ಬಹುತೇಕ ನಿವಾಸಿಗಳು ನಿನ್ನೆಯಿಂದ ಮನೆಯೊಳಗೇ ಇದ್ದಾರೆ. ಮಳೆ ನೀರು ಮನೆಯ ಗೇಟ್ವರೆಗೂ ತುಂಬಿದ್ದು, ಇಂದೂ ಸಹ ಮಳೆಯಾದರೆ, ನೀರು ಮನೆಗಳಿಗೆ ನುಗ್ಗುವುದು ನಿಶ್ಚಿತವಾಗಿದೆ.