ಚಾಮರಾಜನಗರ: ಪಿಯುಸಿ ಅಂತಿಮ ವಿಷಯದ ಪರೀಕ್ಷೆ ಬರೆದ ವಿದ್ಯಾರ್ಥಿನಿ ಯುವಕನೊಟ್ಟಿಗೆ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ. ಕೊಳ್ಳೇಗಾಲ ತಾಲ್ಲೂಕಿನ ಹೊಸ ಹಂಪಾಪುರ ಗ್ರಾಮದ ವಿದ್ಯಾರ್ಥಿನಿ ನಾಪತ್ತೆಯಾದವಳು. ಈಕೆ ಪಟ್ಟಣದ ಮಾನಸ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ಅಂತಿಮ ವಿಷಯದ ಪರೀಕ್ಷೆ ಬರೆದ ಬಳಿಕ ಜೊತೆಯಲ್ಲಿದ್ದ ತಾಯಿ ಎದುರಲ್ಲೇ ಕಾರಿನಲ್ಲಿ ಯುವಕನೊಟ್ಟಿಗೆ ಪರಾರಿಯಾಗಿದ್ದಾಳೆ.
ಓಡುತ್ತಿದ್ದ ಮಗಳನ್ನು ಕಂಡು ಎಲ್ಲಿಗೆ ಹೋಗ್ತಿದ್ದೀಯಾ ಎಂದು ಕೇಳುವಷ್ಟರಲ್ಲೇ ಯುವಕ ಬಂದಿದ್ದ ಕಾರಿನಲ್ಲಿ ಎಸ್ಕೇಪ್ ಆಗಿದ್ದಾಳೆ. ಈ ದೃಶ್ಯವನ್ನು ಕಣ್ಣಾರೆ ಕಂಡು ತಾಯಿ ಕಂಗಲಾಗಿದ್ದಾರೆ. ಅದೇ ಗ್ರಾಮದ ನಾಗರಾಜು ಎಂಬ ಯುವಕನ ಜೊತೆಗೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕೊಳ್ಳೇಗಾಲದ ಪಟ್ಟಣ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ತಾಯಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.