ಕೂಗು ನಿಮ್ಮದು ಧ್ವನಿ ನಮ್ಮದು

ಮುಖ್ಯಮಂತ್ರಿ ಪೋಸ್ಟ್‌ಗಾಗಿ 2,500 ಕೋಟಿ ರೂ. ಬೇಡಿಕೆ ವಿಚಾರ ತನಿಖೆಗೆ ಡಿ.ಕೆ.ಶಿವಕುಮಾರ್ ಒತ್ತಾಯ

ಧಾರವಾಡ: ಪ್ರಿಯಾಂಕ್ ಖರ್ಗೆ ವಿಚಾರ ಇರಲಿ, ಈಗ ಬಸವರಾಜ್ ಪಾಟೀಲ್ ಯತ್ನಾಳ್ ಅವರು 2,500 ಕೋಟಿ ವಿಚಾರ ಹೇಳಿದ್ದಾರೆ. ಮೊದಲು ಅವರಿಗೆ  ನೋಟಿಸ್ ಕೊಟ್ಟು ಕರೆಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸವಾಲು ಹಾಕಿದ್ರು.

ಧಾರವಾಡದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಪಿಎಸ್‍ಐ ನೇಮಕಾತಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ಕೊಟ್ಟು ತನಿಖೆಗೆ ಹಾಜರಾಗಲು ಹೇಳಿದ್ದಾರೆ. ಅವರು ಆಮೇಲೆ ವಿಚಾರಣೆಗೆ ಹಾಜರಾಗುತ್ತಾರೆ. ಆದ್ರೆ ದೆಹಲಿಯಿಂದ ಬಂದ ಕೆಲವರು ಎರಡೂವರೆ ಸಾವಿರ ಕೋಟಿ ನೀಡಿ ನಿಮ್ಮನ್ನು ಸಿಎಂ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಯತ್ನಾಳ್ ಪ್ರಸ್ತಾಪಿಸಿದ್ದ ವಿಚಾರದ ಕುರಿತು ತನಿಖೆ ಆಗಬೇಕು. ಇದರ ಹಿಂದೆ ವಿಶ್ವನಾಥ್, ಬಿಎಸ್‍ವೈ ಕಮಿಷನ್ ಬಗ್ಗೆಯೂ ಹೇಳಿದ್ದರು. ಆಗ ವಿಚಾರಣೆ ಮಾಡಿದ್ರಾ ಎಂದು ಪ್ರಶ್ನಿಸಿದರು.

ಪಿಎಸ್‍ಐ ಅಕ್ರಮ ಹಿನ್ನೆಲೆಯಲ್ಲಿ ಸಚಿವ ಅಶ್ವಥ್ ನಾರಾಯಣ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ರಾಜೀನಾಮೆ ಆಗ್ರಹಿಸಿ ನಾವು ಹೋರಾಟ ಮಾಡುತ್ತಿದ್ದೇವೆ. ಅವರು ಅಕ್ರಮದಲ್ಲಿ ನೇರವಾಗಿ ಸಂಪರ್ಕ ಇಟ್ಟುಕೊಂಡಿದ್ದಾರೆ. ಅವರ ವೃತ್ತಿಯೇ ಇಂತಹ ಸರ್ಟಿಫಿಕೇಟ್ ಕೊಡಿಸುವಂತಹುದು ಎಂದು ಆರೋಪಿಸಿದರು.

ಎಷ್ಟೋ ಜನ ನಾಯಕರ ಹೆಸರನ್ನು ವಿಚಾರಣೆಯಲ್ಲಿ ಹೇಳಿದ್ದಾರೆ. ಅದಕ್ಕಾಗಿಯೇ ಅಧಿಕಾರಿಗಳ ವರ್ಗಾವಣೆಯಾಗಿದೆ. ಸಿಎಂ ತಾವು ಕ್ಲಿನ್ ಆಗಿ ಉಳಿದುಕೊಳ್ಳಬೇಕಿದೆ ಎಂದ ಅವರು, ಸಿಎಂ ಇದರಲ್ಲಿ ಭಾಗಿ ಅಂತಾ ನಾ ಹೇಳಲಾರೆ, ಸಿಎಂ ಭಾಗಿಯಾಗಿಲ್ಲ ಅಂತಾದರೆ ಭಾಗಿಯಾದವರ ಹೆಸರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವರು ತನಿಖೆ ಮಾಡುವವರನ್ನು ಫ್ರೀ ಹ್ಯಾಂಡ್ ಆಗಿ ಬಿಡಬೇಕು. ಏಕೆಂದರೆ ಗೃಹ ಸಚಿವರೇ ಅಪರಾಧಿ, ಗೃಹ ಸಚಿವ ಮತ್ತು ಅಶ್ವಥ್ ನಾರಾಯಣ ಅವರ ಕೆಳಗೆ ಎಲ್ಲ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.

error: Content is protected !!