ಬೆಂಗಳೂರು: 50 ವರ್ಷಗಳ ಸುದೀರ್ಘ ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತಿದ್ದೇನೆ. ಲೌಕಿಕ ಜೀವನದಿಂದ ಆಧಾತ್ಮಿಕ ಜೀವನದತ್ತ ಹೆಜ್ಜೆಯನ್ನಿಡುತ್ತಿದ್ದೇನೆ. ಇದೇ ತಿಂಗಳ ಮೇ 6ರಂದು ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಮಠದ ಶ್ರೀ ಶ್ರೀ ಶ್ರೀ ಜಯೇಂದ್ರ ತೀರ್ಥ ಪುರಿ ಮಹಾ ಸ್ವಾಮಿಜಿಯವರಿಂದ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಲಿದ್ದೇನೆ ಎಂದು ಮಾಜಿ ಸಚಿವ ಹಾಗೂ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಏಪ್ರಿಲ್ 30ರಂದು ರಾಜೀನಾಮೆ ನೀಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆ ಇಲ್ಲದಂತೆ ಕೆಲಸ ಮಾಡಿರುವ ಆತ್ಮ ತೃಪ್ತಿಯಲ್ಲಿ ನಾನು ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ತಿಳಿಸಿದರು.
ನನ್ನ ಸಮುದಾಯಕ್ಕೆ ಶಾಶ್ವತವಾದ ಸಂಸ್ಥೆ ಕಟ್ಟಬೇಕು ಎಂದಾಗ ನಾನು ರಾಜಕೀಯ ಕಾರ್ಯದರ್ಶೀಯಾಗಿದ್ದಾಗ ಬಿ.ಎಸ್.ಯಡಿಯೂರಪ್ಪನವರು ಎಂಟು ಎಕರೆ ಜಮೀನು ಮತ್ತು ಐದು ಕೋಟಿ ಅನುದಾನ ಕೊಟ್ಟಿದ್ದರು. ಅದನ್ನ ಬಳಸಿಕೊಂಡು ನನ್ನ ಕೈಯಲ್ಲಾದ ಹಣ ಮತ್ತು ಜನರಿಂದ ಅಲ್ಪಸ್ವಲ್ಪ ಹಣ ಪಡೆದು ಒಂದು ಗುರು ಪೀಠವನ್ನು ಕಟ್ಟಿದ್ದೇನೆ. ಹಾಸ್ಟೆಲ್, ಸಮುದಾಯ ಭವನವನ್ನು ಕಟ್ಟಿದ್ದೇನೆ. ನಮ್ಮ ಜನಾಂಗಕ್ಕೂ ಒಂದು ಗುರುಪೀಠ ಮಾಡಬೇಕು ಎಂದುಕೊಂಡು ಮೂವರು ಯುವಕರನ್ನ ಸಿದ್ದಗಂಗಾ ಮಠ, ಮುರುಗರಾಜೇಂದ್ರ ಮಠ, ರಾಜರಾಜೇಶ್ವರಿ ಮಠದಲ್ಲಿ ನಾನು ಸೇರಿಸಿದ್ದೆ. ಆದ್ರೆ ಕಾರಣಾಂತರಗಳಿಂದ ಅವರು ಹೊರಟು ಹೋದರು. ಕೊನೆಯದಾಗಿ ರಾಜರಾಜೇಶ್ವರಿ ಮಠದಲ್ಲಿ ಜಯತೀರ್ಥ ಸ್ವಾಮೀಜಿಗಳು ಯಾಗ ಮಾಡುತ್ತಿದ್ದಾಗ ನನ್ನನ್ನು ಕರೆದು ಪೀಠಾಧಿಪತಿ ಆಗಬೇಕಿದ್ದರೇ ಬದ್ಧತೆ ಇರಬೇಕು, ಹೀಗಾಗಿ ನೀವೇ ಮೊದಲ ಪೀಠಾಧ್ಯಕ್ಷರಾಗಿ ಆನಂತರ ಯೋಗ್ಯ ಶಿಷ್ಯರು ಬಂದಾಗ ಅವರನ್ನ ಪೀಠಾಧಿಪತಿ ಮಾಡಿ ಎಂದು ಆದೇಶಿಸಿದರು. ಅದರಂತೆ ನಾನೇ ಪೀಠಾಧ್ಯಕ್ಷನಾಗಲಿದ್ದೇನೆ ಎಂದು ಅವರು ಹೇಳಿದ್ರು.
ನಾನು ಓದಿರುವ ಪ್ರಕಾರ, ಸ್ವಾಮೀಜಿಗಳಲ್ಲಿ ಮಾಂತ್ರಿಕ ಸ್ವಾಮೀಜಿ, ವೈದಿಕ ಸ್ವಾಮೀಜಿ, ಸ್ವಾರ್ಥ ಸ್ವಾಮೀಜಿ, ಆಶೀರ್ವಾದ ಸ್ವಾಮೀಜಿಗಳಿರುತ್ತಾರೆ. ಕೊನೆದಾಗಿ ಸಮಾಜ ಸುಧಾರಣಾ ಸ್ವಾಮೀಜಿಗಳು ಇರುತ್ತಾರೆ. ನಾನು ಸಮಾಜ ಸುಧಾರಣಾ ಸ್ವಾಮೀಜಿಯಾಗಿ ದೀಕ್ಷೆಯನ್ನು ಪಡೆದುಕೊಳ್ಳುತ್ತಿದ್ದೇನೆ ಎಂದು ಪುಟ್ಟಸ್ವಾಮಿ ಅವರು ತಿಳಿಸಿದರು.
ನಾನು ಸಚಿವ ಸಂಪುಟ ದರ್ಜೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಆದ್ರೆ ನನಗೆ ಅಧಿಕಾರಕ್ಕಿಂತ ಹೆಚ್ಚಾಗಿ ನಮ್ಮ ಜನಾಂಗದ ಭವಿಷ್ಯ ಮುಖ್ಯ. ಹೀಗಾಗಿ ನಮ್ಮ ಜನಾಂಗದ ಭವಿಷ್ಯಕ್ಕಾಗಿ ನನ್ನ ಜೀವಾವಧಿಯಲ್ಲಿ ಗುರುಪೀಠವನ್ನು ಸ್ಥಾಪನೆ ಮಾಡಿ ಜನರ ಅಭಿಪ್ರಾಯ ಪಡೆದು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಅವರು ತಿಳಿಸಿದ್ರು.
ನಾನು ಕಟ್ಟಿರುವ ಸಂಸ್ಥೆಯಲ್ಲಿ ಬಡ ಮಕ್ಕಳಿಗೆ ಮತ್ತು ಅನಾಥ ಮಕ್ಕಳಿಕೆ ವಿದ್ಯೆ ದಾಸೋಹ ಮತ್ತು ಅನ್ನ ದಾಸೋಹ ಮಾಡುತ್ತಾ ನನ್ನ ಜೀವನ ಕಳಿಯಬೇಕು ಎಂಬ ತೀರ್ಮಾಕ್ಕೆ ಬಂದಿದ್ದೇನೆ ಎಂದು ಹೇಳಿದ್ರು. ನಾನು ಹಿಂದುಳಿದ ವರ್ಗಗಳ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿರುವವನು. ನಾನು ಹಿಂದುಳಿದ ಸಂಘಟನೆಯಲ್ಲಿ ಹೋರಾಟ ಮಾಡುತ್ತಿದ್ದೆ. ಬಿ.ಎಸ್.ಯಡಿಯೂರಪ್ಪನವರು ಎಂಎಲ್ ಸಿ, ಮಂತ್ರಿಯನ್ನಾಗಿ ಮಾಡಿದರು. ಇಡೀ ದೇಶದಲ್ಲಿ ಸಹಕಾರ ವಲಯದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ಸ್ವಲ್ಪ ಸಮಯದಲ್ಲಿ ಎರಡು ಮೀಸಲಾತಿಯನ್ನು ಕಲ್ಪಿಸಿಕೊಟ್ಟಿದ್ದು ಸಾರ್ಥಕವಾಗಿದೆ ಎಂದರು. .
ಮೇ 4ರಂದು ರಾಜರಾಜೇಶ್ವರಿ ದೇವಸ್ಥಾನದಲ್ಲಿರುವ ಕೈಲಾಸ ಮಠಕ್ಕೆ ಹೋಗುತ್ತಿದ್ದೇನೆ. ಐದನೇ ತಾರೀಕು ಹೋಮ ಇದ್ದು, ಆರನೇ ತಾರೀಕು ನನಗೆ ದೀಕ್ಷೆಯನ್ನ ಕೊಡುತ್ತಿದ್ದಾರೆ. ದೀಕ್ಷೆ ಕೊಟ್ಟ ಬಳಿಕ ನಾನು ಎಂಟನೇ ತಾರೀಕು ನಮ್ಮ ಮಠಕ್ಕೆ ತೆರಳುತ್ತೇನೆ. ಮೇ 15ರಂದು ನನಗೆ ಪಟ್ಟಾಭಿಷೇಕವನ್ನು ಕೈಲಾಸ ಮಠದ ಶ್ರೀ ಶ್ರೀ ಶ್ರೀ ಜಯತೀರ್ಥ ಸ್ವಾಮೀಜಿಗಳು ನೆರವೇರಿಸಿಕೊಡಲಿದ್ದಾರೆ ಎಂದರು.
ಮೇ 15 ರಂದು ಬೆಂಗಳೂರಿನ ಮಾದನಾಯ್ಕನ ಹಳ್ಳಿಯಲ್ಲಿರುವ ಶ್ರೀಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಿ ಅಲಂಕೃತಗೊಳ್ಳಿಲಿದ್ದಾರೆ.
ಈ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಎಸ್ ಎಂ ಕೃಷ್ಣ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಆದ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವಾರು ಸಚಿವರು ಭಾಗವಹಿಸಲಿದ್ದಾರೆ. ಮುಖ್ಯವಾಗಿ 20 ಮಠಾಧೀಕ್ಷರು ದಿವ್ಯ ಸಾನಿಧ್ಯವನ್ನ ವಹಿಸಿಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್, ಶ್ರೀ ಕ್ಷೇ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಟ್ರಸ್ಟ್ ನ ಸದಸ್ಯರು ಭಾಗವಹಿಸಿದ್ದರು.