ಕಲಬುರಗಿ: PSI ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ CID ಅಧಿಕಾರಿಗಳು ಬಂಧಿಸಿದ್ದರು. ಸದ್ಯ ಹನ್ನೊಂದು ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ CID ಕಸ್ಟಡಿಗೆ ನೀಡಿದೆ. PSI ನೇಮಕಾತಿ ಅಕ್ರಮ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ದಿವ್ಯಾ ಹಾಗರಗಿ ಕಳೆದ ಹದಿನೆಂಟು ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಆದ್ರೆ CID ಅಧಿಕಾರಿಗಳು ಶುಕ್ರವಾರ ಮಹಾರಾಷ್ಟ್ರದ ಪುಣೆಯ ಹೋಟೆಲ್ವೊಂದರ ಹತ್ತಿರ ದಿವ್ಯಾ ಹಾಗರಗಿಯನ್ನು ಬಂಧಿಸಿದ್ದಾರೆ.
ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದಿವ್ಯಾ ಹಾಗರಗಿ ಕಳೆದ ರಾತ್ರಿ ಮಹಿಳಾ ನಿಲಯದಲ್ಲಿಯೇ ಕಾಲ ಕಳೆದಿದ್ದಾರೆ. ಸದಾ AC ಕೋಣೆಯಲ್ಲಿ ಮಲಗುತ್ತಿದ್ದ ದಿವ್ಯಾ ಹಾಗರಗಿ ನಿನ್ನೆ ತಡರಾತ್ರಿವರಗೆ ಫ್ಯಾನ್ ಕೆಳಗೆ ನಿದ್ರೆ ಬರದೆ ಪರದಾಡಿದ್ದಾರೆ. ಅಲ್ಲದೇ ನಿನ್ನೆ ಮಧ್ಯಾಹ್ನ ಊಟವನ್ನು ಸಹ ನಿರಾಕರಿಸಿದ್ದರು. ಆದ್ರೆ ರಾತ್ರಿ ಸ್ವಲ್ಪ ಊಟ ಮಾಡಿದ್ದಾರೆ. ಕೋಟಿ, ಕೋಟಿ ಹಣವಿದ್ದರೂ ಅಕ್ರಮದ ಜಾಲಕ್ಕೆ ಸಿಲುಕಿರುವ ದಿವ್ಯಾ ಹಾಗರಗಿ ಇದೀಗ ತಮ್ಮನ್ನು ಭೇಟಿಯಾದವರ ಮುಂದೆ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರೆ. ಕಲಬುರಗಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ದಿವ್ಯಾ ಹಾಗರಗಿ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವೆಲ್ಲವೂ ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಯಾಗಿದೆ.