ನಟಿ ರೋಜಾ: ಬಹುಭಾಷಾ ನಟಿ ರೋಜಾ ಒಂದು ಕಾಲದಲ್ಲಿ ಟಾಲಿವುಡ್ನ ಬಹು ಬೇಡಿಕೆಯ ನಟಿ. ತೆಲುಗು ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಸೌತ್ ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಮೂಲಕ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದವರು. ಇತ್ತೀಚಿನ ವರ್ಷಗಳಲ್ಲಿ ಅವರು ರಾಜಕಾರಣದಲ್ಲಿ ಮುಳುಗಿ ಹೋಗಿದ್ದರೂ, ಕಿರುತೆರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಿರಲಿಲ್ಲ. ಟಿವಿ ರಿಯಾಲಿಟಿ ಶೋಗಳ ಜತೆ ರೋಜಾ ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದರು. ಇದೀಗ ಏಕಾಏಕಿ ಟಿವಿ ರಿಯಾಲಿಟಿ ಶೋಗಳಿಗೆ ಗುಡ್ ಬೈ ಹೇಳಿ ತಮ್ಮ ಕನಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ ರೋಜಾ
ಹೌದು, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಇದರಲ್ಲಿ ಅನೇಕ ಹೊಸಬರಿಗೆ ಸಚಿವ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ಇದರಲ್ಲಿ ರೋಜಾ ಕೂಡ ಒಬ್ಬರಾಗಿದ್ದು, ಸಚಿವ ಸಂಪುಟ ಸ್ಥಾನ ದೊರೆಯುತ್ತಿರುವ ಸಂತಸದಲ್ಲಿ ಸಿನಿಮಾ ಮತ್ತು ತಾವು ಭಾಗವಹಿಸುತ್ತಿದ್ದ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿ, ಸಂಪೂರ್ಣವಾಗಿ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ತಮ್ಮ ದೊಡ್ಡ ಕನಸ್ಸು ನನಸಾಗುತ್ತಿರುವ ಖುಷಿ ರೋಜಾ ಅವರಿಗಿದ್ದರೂ, ಅವರ ಅಭಿಮಾನಿಗಳಿಗೆ ಮಾತ್ರ ಇನ್ಮುಂದೆ ರೋಜಾರನ್ನು ಸ್ಕ್ರೀನ್ ಮೇಲೆ ನೋಡಲು ಆಗುವುದಿಲ್ಲ ಎಂದು ಬೇಸರವಿರಲಿದೆ. ಇದೀಗ ರೋಜಾ ಅವರು ನಡೆಸಿ ಕೊಡುತ್ತಿದ್ದ ರಿಯಾಲಿಟಿ ಶೋಗೆ ಬೇರೆ ಬೇರೆ ಹಿರಿಯ ನಟಿಯರನ್ನು ಕರೆತರಲಾಗುತ್ತಿದ್ದು, ರೋಜಾ ಅವರ ಜಾಗಕ್ಕೆ ಯಾರು ಬರುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ. ಇನ್ನೂ ಸಚಿವೆ ಸ್ಥಾನ ಪಡೆದ ರೋಜಾ ಅವರಿಗೆ ರಿಯಾಲಿಟಿ ಶೋ ಕಲಾವಿದರು ಮತ್ತು ಚಿತ್ರರಂಗದ ತಾರೆಯರು ಸೇರಿದಂತೆ ಗಣ್ಯಾತಿ ಗಣ್ಯರು ಶುಭ ಹಾರೈಸಿದ್ದಾರೆ.