ಕೂಗು ನಿಮ್ಮದು ಧ್ವನಿ ನಮ್ಮದು

ಗೃಹ ಸಚಿವರು ವಿಲನ್ ರೋಲ್ ಮಾಡ್ತಿದ್ದಾರೋ, ಕಾಮಿಡಿ ರೋಲ್ ಮಾಡ್ತಿದ್ದಾರೋ ಗೊತ್ತಿಲ್ಲ: ಹೆಚ್‌.ಡಿ.ಕುಮಾರಸ್ವಾಮಿ

ಮೈಸೂರು: ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಕ್ಕೊಂದು ಹೇಳಿಕೆ ನೀಡುತ್ತಿರುವ ಅರಗ ಜ್ಞಾನೇಂದ್ರ ಅವರು ಕಾಮಿಡಿ ರೋಲ್ ಮಾಡಲು ಗೃಹ ಸಚಿವರಾಗಿದ್ದಾರಾ? ಅಥವಾ ವಿಲನ್ ರೋಲ್ ಮಾಡುತ್ತೀದ್ದಿರಾ? ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಕೊಲೆಯಾದ ಚಂದ್ರು ದಲಿತ ಸಮಾಜದ ಯುವಕ ಅಂತಾ ಗೃಹ ಸಚಿವರು ಹೇಳಿದ್ದಾರೆ. ಆದ್ರೆ, ಇವತ್ತು ನೀಡುತ್ತಿರುವ ಹೇಳಿಕೆಗಳು ಅವರ ಸಣ್ಣತನವನ್ನು ತೋರಿಸುತ್ತದೆ.

ಸಮಾಜದ ಶಾಂತಿ ಕದಡುವ ವೇಳೆ, ಗೃಹ ಸಚಿವರಿಗೆ ತಮ್ಮ ಸ್ಥಾನದ ಜವಾಬ್ದಾರಿ ಅರಿವಿಲ್ಲದಂತಾಗಿದೆ. ಇದರಲ್ಲಿ ಯಾವುದು ಸತ್ಯ ಎಂಬುದು ತಿಳಿಯದೇ ಮಂತ್ರಿಯೇ ತನಿಖೆಗೆ ಮುನ್ನ ತೀರ್ಪು ಕೊಟ್ಟಿದ್ದಾರೆ. ಹಿಂದೂ ಮುಸ್ಲಿಂ ಮಧ್ಯೆ ಕಂದಕ ತರುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಎಚ್ಡಿಕೆ ದೂರಿದ್ದಾರೆ. ಮುಖ್ಯಮಂತ್ರಿಗಳ ಮೌನ ರಾಜ್ಯದಲ್ಲಿ ಅನಾಹುತ ಮಾಡುತ್ತದೆ. ಇಂತಹ ಘಟನೆಗಳನ್ನು ಸರ್ಕಾರ ಪ್ರಾರಂಭಿಕ ಹಂತದಿಂದಲೇ ಸರಿಪಡಿಸಬೇಕು. ಗೃಹಸಚಿವರ ಹೇಳಿಕೆಯಿಂದ ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಹಾಳಾಗುತ್ತಿದೆ. ಇದರಲ್ಲಿ ನಾನು ಯಾವುದೇ ಸಮಾಜದ ಓಲೈಕೆ ಮಾಡುತ್ತಿಲ್ಲ. ರಾಜ್ಯದ ಎಲ್ಲ ಜನರೂ ನನಗೆ ಮುಖ್ಯ. ಆದ್ದರಿಂದ ಮುಖ್ಯಮಂತ್ರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಸಿನಿಮಾಗಳೇ ಕೃತ್ಯಗಳಿಗೆ ಪ್ರೇರಣೆ: ಇತ್ತೀಚಿನ ದಿನಗಳಲ್ಲಿ ಸಿನಿಮಾಗಳೇ ಹುಡುಗರಿಗೆ ಈ ರೀತಿಯ ಕೃತ್ಯ ಎಸಗಲು ಪ್ರೇರಣೆ ನೀಡುತ್ತಿವೆ. ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದ್ದು, ಇಂತಹ ಸಿನಿಮಾಗಳನ್ನು ಮಾಡಂದತೆ ನಿರ್ದೇಶಕರಿಗೂ ಎಚ್ಚರ ವಹಿಸಬೇಕು. ಈ ಪ್ರಕರಣದಲ್ಲಿ ಮುಸ್ಲಿಂ ಯುವಕರೆಂದು ಕನಿಕರ ತೋರದೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಬೇರೆ ಬೇರೆ ವಿಚಾರಕ್ಕೆ ಕೊಲೆಯಾದವು, ಆದ್ರೆ, ಕೊಲೆ ವಿಚಾರದಲ್ಲಿ ಬಿಜೆಪಿ ಸೆಲೆಕ್ಟಿವ್ ಆಗಿ ಕಾರ್ಯ ಪ್ರವೃತವಾಗುತ್ತದೆ ಇದು ಸರಿಯಲ್ಲ ಎಂದು ಕುಮಾರಸ್ವಾಮಿ ಅವರು ಕುಟುಕಿದರು. ಇದೇ ವೇಳೆ ಸಮಾಜ ಹಾಳು ಮಾಡಿ, ಕುಟುಂಬಗಳ ಬೀದಿಗೆ ತಂದು ಮತ್ತೆ ಮುಖ್ಯಮಂತ್ರಿ ಆಗುವ ಆಸೆ ನನಗೆ ಇಲ್ಲ. ನಾನು 2 ರಾಜಕೀಯ ಪಕ್ಷಗಳನ್ನು ಈ ರಾಜ್ಯದಿಂದ ಕಿತ್ತಾಕುವ ಸುಪಾರಿಯನ್ನು ಜನರಿಂದ ಪಡೆದಿದ್ದೇನೆ. ನಾನು ಯಾವ ಸಮಾಜದ ಓಲೈಕೆಗೂ ರಾಜಕಾರಣ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

error: Content is protected !!