ಬೆಂಗಳೂರು: ಚಪ್ಪಲಿ ಏಟು ತಿನ್ನಬಹುದು ಆದ್ರೆ ದುಡ್ಡೇಟು ತಿನ್ನೋಕೆ ಆಗಲ್ಲ. ನೂರು ಬಾರಿ ಚಪ್ಪಲಿಯಲ್ಲಿ ಪಟ ಪಟ ಅಂತ ಹೊಡೆದರೂ ತಿನ್ನಬಹುದು. ಆದರೆ ದುಡ್ಡಿನ ಏಟು ತಿನ್ನಲು ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ರು. ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಇವತ್ತು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ನಾಯಕರುಗಳು ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಸಮಯದಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಾ ವಾಗ್ದಾಳಿ ನಡೆಸಿದ ಡಿ.ಕೆ.ಶಿವಕುಮಾರ್, ಬೆಲೆ ಏರಿಕೆ ಗಗನಕ್ಕೆ ಹೋಗಿದೆ. ಆದಾಯ ಪಾತಾಳಕ್ಕೆ ಹೋಗಿದೆ. ಇವತ್ತಿಗೆ ಆರ್ಥಿಕ ವರ್ಷದ ಲೆಕ್ಕಾಚಾರ ಮುಗಿದಿದೆ. ಹಾಗಾಗಿ ಇವತ್ತೇ ಈ ಪ್ರತಿಭಟನೆ ಮಾಡಿದ್ದೇವೆ ಎಂದರು. ದಿನಾ ಪಿಕ್ ಪಾಕೆಟ್ ಆಗುತ್ತಿದೆ. ಗ್ಯಾಸ್ ಸಿಲಿಂಡರ್, ಬೈಕ್ ಕಾರಿಗೆ ಹಾರ ಹಾಕಿ ಪೂಜೆ ಮಾಡಿ ವಿನೂತನ ಪ್ರತಿಭಟನೆ ಮಾಡಿದ್ದೇವೆ. ಜನರ ನೋವನ್ನು ಬಿಜೆಪಿ ವಿರುದ್ಧ ಮತ ಹಾಕಿ, ಬಿಜೆಪಿ ಸರ್ಕಾರ ಕಿತ್ತೆಸೆಯುವ ಮೂಲಕ ಕಳೆಯಬೇಕು ಎಂದು ಡಿಕೆಶಿ ಕಿಡಿಕಾರಿದರು.
ಬೆಲೆ ಏರಿಕೆ ಮುಕ್ತ ಅಭಿಯಾನಕ್ಕೆ ಎಐಸಿಸಿ ಚಾಲನೆ ನೀಡಿದೆ. ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ತಳ್ಳುಗಾಡಿ ಮೇಲೆ ಇಟ್ಟ ಬೈಕಿಗೆ ಹಾರ ಹಾಕಿ ಊದುಬತ್ತಿ ಹಚ್ಚಿ ಡಿಕೆಶಿ ಆರತಿ ಎತ್ತಿದರು. ಬಳಿಕ ಪೂಜೆ ಮಾಡಿ ಗಂಟೆ ಬಾರಿಸಿ ತಲೆ ಮೇಲೆ ಸಿಲೆಂಡರ್ ಹೊತ್ತು ಪ್ರತಿಭಟನೆ ನಡೆಸಿದರು.