ಬೆಂಗಳೂರು: ಇವತ್ತು ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ಎರಡನೇ ದಿನದ ಪರೀಕ್ಷೆ ನಡೆಯಲಿದೆ. ಇವತ್ತು ದ್ವಿತೀಯ ಭಾಷೆಯ ಪರೀಕ್ಷೆ ನಡೆಯಲಿದೆ. ಮೊದಲ ದಿನದ ಪರೀಕ್ಷೆಗೆ ಹಿಜಾಬ್ ನೆಪದಲ್ಲಿ ಗೈರಾಗಿದ್ದ ವಿದ್ಯಾರ್ಥಿನಿಯರು ಇಂದಾದ್ರೂ ಹಾಜರಾಗ್ತಾರಾ ಅಥವಾ ಗೈರು ಹಾಜರಿ ಮುಂದುವರೆಸ್ತಾರಾ..? ಎಂಬ ಕುತೂಹಲವಿದೆ. ಎರಡನೇ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು, ಇವತ್ತು ಮುಂಜಾನೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆಯಲಿದೆ. ಮೊನ್ನೆಯ ಪರೀಕ್ಷೆಯಲ್ಲಿ ಕಲಬುರಗಿಯ ಜೇವರ್ಗಿ ತಾಲೂಕಿನ ಇಜೇರಿಯಲ್ಲಿ ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು. ಹಾಗಾಗಿ ಶಿಕ್ಷಕನ ವಿರುದ್ಧ ಶ್ರೀರಾಮಸೇನೆ ದೂರು ನೀಡಿದೆ.
ಸರ್ಕಾರಿ ಉರ್ದು ಪ್ರೌಢ ಶಾಲೆಯ ಶಿಕ್ಷಕ ಮಹ್ಮದ್ ಅಲಿಯನ್ನು ಅಮಾನತು ಮಾಡುವಂತೆ ಬಿಇಒಗೆ ಆಗ್ರಹಿಸಿದ್ದಾರೆ. ಇನ್ನು ಗದಗದಲ್ಲಿ ಮೊದಲ ದಿನದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆದಿದ್ದರು. ಸಿ.ಎಸ್ ಪಾಟೀಲ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಶಾಲಾ ಆಡಳಿತ ಮಂಡಳಿ ಮೌನ ವಹಿಸಿತ್ತು.