ಕೂಗು ನಿಮ್ಮದು ಧ್ವನಿ ನಮ್ಮದು

ಬ್ರಿಟಿಷ್ ಕೌನ್ಸಿಲ್ ಜೊತೆ ಮೂರು ವರ್ಷಗಳ ಒಪ್ಪಂದಕ್ಕೆ ಉನ್ನತ ಶಿಕ್ಷಣ ಇಲಾಖೆ ಅಂಕಿತ

ಬೆಂಗಳೂರು: ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ತಂದುಕೊಡುವ 3 ವರ್ಷಗಳ ಒಡಂಬಡಿಕೆಗೆ ಕರ್ನಾಟಕ ಸರ್ಕಾರ ಮತ್ತು ಬ್ರಿಟಿಷ್ ಕೌನ್ಸಿಲ್ ಸಂಸ್ಥೆಗಳು ಶುಕ್ರವಾರ ಅಂಕಿತ ಹಾಕಿದವು. ವಿಕಾಸಸೌಧದಲ್ಲಿ ಇದರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್ ಹಾಗೂ ಬ್ರಿಟಿಷ್ ಕೌನ್ಸಿಲ್ ಪರವಾಗಿ ಆ ಸಂಸ್ಥೆಯ ದಕ್ಷಿಣ ಭಾರತ ಮಟ್ಟದ ನಿರ್ದೇಶಕ ಜನಕ ಪುಷ್ಪನಾಥನ್ ಅಂಕಿತ ಹಾಕಿ, ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅಶ್ವತ್ಥನಾರಾಯಣ ಈ ಒಡಂಬಡಿಕೆಯು ರಾಜ್ಯದ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ, ಇಂಗ್ಲಿಷ್ ಕಲಿಕೆ ಹಾಗೂ ಸಂಶೋಧನೆಗೆ ಅಗತ್ಯವಾದ ಶಿಸ್ತನ್ನು ಕಲಿಸಲಿದೆ. ರಾಜ್ಯ ಮತ್ತು ಇಂಗ್ಲೆಂಡ್‍ನ ಶಿಕ್ಷಣ ಸಂಸ್ಥೆಗಳ ಜೊತೆ ವಿದ್ಯಾರ್ಥಿಗಳ ವಿನಿಮಯ (ಟ್ವಿನ್ನಿಂಗ್ ಕಾರ್ಯಕ್ರಮ), ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ನಾಯಕತ್ವ ಬೆಳೆಸುವ ವಿಷಯದಲ್ಲಿ ಒಪ್ಪಂದ ಗಮನಹರಿಸಲಿದೆ. ಇದರಿಂದಾಗಿ ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ ಎಂದ್ರು. ಬ್ರಿಟಿಷ್ ಕೌನ್ಸಿಲ್‍ನೊಂದಿಗೆ ಕಳೆದೊಂದು ದಶಕದಿಂದ ರಾಜ್ಯದ ಕೆಲವು ಸಂಬಂಧಗಳು ಪಟ್ಟು ಸುಧಿಸಿವೆ.

ಈ ಸಹಭಾಗಿತ್ವದ ಮೂಲಕ ರಾಜ್ಯದ ವಿ.ವಿ.ಗಳ ಪಠ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಲಾಗಿದೆ. ಜೊತೆಗೆ, ಒಳ್ಳೆಯ ಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಹೇಳಿದ್ರು. ಈ ಒಡಂಬಡಿಕೆಯು ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆಯಲು ಬೇಕಾದ ಕೌಶಲ್ಯಗಳನ್ನು ಹೆಚ್ಚಿಸಲಿದೆ. ಜೊತೆಗೆ ಯುನೈಟೆಡ್ ಕಿಂಗ್ಡ್ಂ ಮತ್ತು ಭಾರತದ ನಡುವೆ ಶೈಕ್ಷಣಿಕ ಸಂಶೋಧನಾ ಉಪಕ್ರಮ ಹಾಗೂ ಗೋಯಿಂಗ್ ಗ್ಲೋಬಲ್ ಕಾರ್ಯಕ್ರಮಗಳ ಮೂಲಕ ಈ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದ್ರು.

ಬಹುಮುಖ್ಯವಾಗಿ ಐಟಿಐ, ಎಂಜಿನಿಯರಿಂಗ್ ಹಾಗೂ ವ್ಯವಸ್ಥಾಪನಾ ವಿಜ್ಞಾನ (ಮ್ಯಾನೇಜ್ಮೆಂಟ್ ಕೋರ್ಸಸ್)ಗಳನ್ನು ಓದುತ್ತಿರುವವರಿಗೆ ಇದರಿಂದ ಅಪಾರ ಲಾಭವಾಗಲಿದೆ. ಅಲ್ಲದೇ ಕರ್ನಾಟಕದ ವಿದ್ಯಾರ್ಥಿಗಳು ಇಂಗ್ಲೆಂಡಿನ ವಿಶ್ವವಿದ್ಯಾಲಯಗಳಿಗೆ ತೆರಳಿ ಉನ್ನತಾಧ್ಯಯನ ಮಾಡಲು ಅವಕಾಶವಾಗಲಿದೆ ಎಂದು ಮಾಹಿತಿ ನೀಡಿದ್ರು. ಮಿಗಿಲಾಗಿ, 2 ಕಡೆಯ ಉತ್ಕೃಷ್ಟತಾ ಕೇಂದ್ರಗಳು ಸುಸ್ಥಿತ ಸಹಭಾಗಿತ್ವವನ್ನು ಹೊಂದುವ ಮೂಲಕ ಸಂಶೋಧನೆ ಹಾಗೂ ನಾವೀನ್ಯತೆಗಳಿಗೆ ಹೆಚ್ಚು ಉತ್ತೇಜನ ನೀಡಲಿವೆ. ಇದರಿಂದಾಗಿ ರಾಜ್ಯದ ವಿದ್ಯಾರ್ಥಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್, ಎಡ್-ಟೆಕ್, ಜೀವವಿಜ್ಞಾನಗಳು ಮತ್ತು ಸೈಬರ್ ಸೆಕ್ಯುರಿಟಿಯಂತಹ ಅತ್ಯಾಧುನಿಕ ಕೋರ್ಸ್‍ಗಳನ್ನು ಕಲಿಯಬಹುದು ಎಂದು ತಿಳಿಸಿದ್ರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇಂಗ್ಲೆಂಡ್ ಸರ್ಕಾರದ ಅಂತರ ರಾಷ್ಟ್ರೀಯ ಶಿಕ್ಷಣ ಚಾಂಪಿಯನ್, ಶಿಕ್ಷಣ ತಜ್ಞ ಸರ್ ಸ್ಟೀವ್ ಸ್ಮಿತ್, ಈ ವರ್ಷದ ಮೇ ತಿಂಗಳಲ್ಲಿ ತಮ್ಮ ದೇಶದಲ್ಲಿ ನಡೆಯಲಿರುವ ವಿಶ್ವ ಶಿಕ್ಷಣ ಒಕ್ಕೂಟದ ಸಮಾವೇಶಕ್ಕೆ ಸಚಿವರನ್ನು ಆಹ್ವಾನಿಸಿದ್ರು. ಇದರಂತೆ ರಾಜ್ಯದಿಂದ ಉನ್ನತ ಶಿಕ್ಷಣ ಸಚಿವರ ನೇತೃತ್ವದಲ್ಲಿ ತೆರಳಲಿರುವ ನಿಯೋಗದಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಪ್ರತಿನಿಧಿಗಳು, ಕೆಲವು ವಿ.ವಿ.ಗಳ ಕುಲಪತಿಗಳು ಹಾಗೂ ಇಲಾಖೆಯ ಹಲವು ಉನ್ನತಾಧಿಕಾರಿಗಳು ಇರಲಿದ್ದಾರೆ.

error: Content is protected !!