ಬೆಂಗಳೂರು: ಕರ್ನಾಟಕದಲ್ಲಿ ಅವಧಿಗೂ ಮುನ್ನವೇ BJP ವಿಧಾನಸಭಾ ಚುನಾವಣೆ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ 4 ರಾಜ್ಯಗಳನ್ನು ಬಿಜೆಪಿ ಗೆದ್ದಿರುವ ಕಾರಣ ಈಗ ಈ ಪ್ರಶ್ನೆ ದಿಢೀರ್ ಎದ್ದಿದೆ. 15ನೇ ವಿಧಾನಸಭೆಯ ಅವಧಿ 2023ರವರೆಗೆ ಇದೆ. ಒಂದು ವೇಳೆ ರಾಜ್ಯದಲ್ಲಿ ತನ್ನ ಪರವಾಗಿ ಅಲೆ ಇರುವುದು ಸ್ಪಷ್ಟವಾದ್ರೆ ಅವಧಿ ಪೂರ್ಣಗೊಳ್ಳುವ ಮುನ್ನವೇ ಬಿಜೆಪಿ ಚುನಾವಣೆಗೆ ಹೋಗುವ ಸಾಧ್ಯತೆಯಿದೆ.
ಈ ವರ್ಷದ ಕೊನೆಯಲ್ಲಿ ಗುಜರಾತ್ನಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಸಮಯದಲ್ಲಿ ಕರ್ನಾಟಕ ಚುನಾವಣೆ ನಡೆಸುವ ಬಗ್ಗೆ ಬಿಜೆಪಿ ವಲಯದಲ್ಲಿ ಮಾತುಕತೆ ನಡೆಯುತ್ತಿರುವ ವಿಚಾರ ಮೂಲಗಳಿಂದ ಮಾದ್ಯಮಗಳ ತಿಳಿದು ಬಂದಿದೆ. ಏಪ್ರಿಲ್ನಲ್ಲಿ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ನಂತರ ಸಮೀಕ್ಷೆ ಮಾಡಲು ಹೈಕಮಾಂಡ್ ಮುಂದಾಗಿದೆ. ಈ ಸಮೀಕ್ಷೆಯಲ್ಲಿ ಬರುವ ಫಲಿತಾಂಶದ ಆಧಾರದಲ್ಲಿ ಚುನಾವಣೆಗೆ ಹೋಗಬೇಕೊ? ಅಥವಾ ಬೇಡವೊ ಎಂಬುದನ್ನು ಹೈಕಮಾಂಡ್ ನಿರ್ದರಿಸಲಿದೆ.
ಒಟ್ಟು 3 ಸರ್ವೇಗಳಲ್ಲಿ 2 ರಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾದ್ರೆ ಮಾತ್ರ ಅವಧಿಗೂ ಮುನ್ನ ಚುನಾವಣೆಗೆ ಹೋಗುವ ಬಗ್ಗೆ ಬಿಜೆಪಿ ಹೈಕಮಾಂಡ್ ಯೋಚನೆ ಮಾಡಿದೆ. ಇಲ್ಲದಿದ್ದರೆ ಗುಜರಾತ್ ಚುನಾವಣೆ ಬಳಿಕವೇ ಕರ್ನಾಟಕ ಚುನಾವಣೆ ಎದುರಿಸುವ ಸಾಧ್ಯತೆಯಿದೆ. ಸಮೀಕ್ಷೆಯ ರಿಪೋರ್ಟ್ ಆಧಾರದ ಮೇಲೆ ಬಿಜೆಪಿ ತಂತ್ರಗಾರಿಕೆ ಬದಲಾವಣೆಯಾಗಲಿದೆ. ಪ್ರಧಾನಿ ಮೋದಿ ರಾಜ್ಯಪ್ರವಾಸಕ್ಕೂ ಮುನ್ನ ಕ್ಯಾಬಿನೆಟ್ ಪುನಾರಚನೆ ಆದರೂ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಈ ಮೂಲಕ ಎಲೆಕ್ಷನ್ ಇಯರ್, ಎಲೆಕ್ಷನ್ ಕ್ಯಾಬಿನೆಟ್, ಎಲೆಕ್ಷನ್ ಪಾರ್ಟಿ ಪ್ರೆಸಿಡೆಂಟ್, ಕೊನೆಗೆ ಎಲೆಕ್ಷನ್ಗೆ ರೆಡಿ ಎಂಬ ಸಂದೇಶವನ್ನು ರವಾನಿಸುವ ಸಾಧ್ಯತೆಯಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆಯುವ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ. ವಿಧಾನಸಭಾ ಅವಧಿ ಪೂರ್ಣಗೊಳ್ಳುವ ಮುನ್ನವೇ ಚುನಾವಣೆಗೆ ಹೋಗುವುದು ಹೊಸದೆನಲ್ಲ. ಈ ಹಿಂದೆ 2018ರಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್(ಕೆಸಿಆರ್) ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಿದ್ರು. ಈ ಚುನಾವಣೆಯಲ್ಲಿ ಒಟ್ಟು 119 ಸ್ಥಾನಗಳ ಪೈಕಿ 103 ಸ್ಥಾನಗಳನ್ನು ಜಯಿಸುವ ಮೂಲಕ ತೆಲಂಗಾಣ ಮತ್ತೆ ಅಧಿಕಾರಕ್ಕೆ ಏರಿತ್ತು. 2019ರ ಲೋಕಸಭಾ ಚುನಾವಣೆ ವೇಳೆ ಚುನಾವಣೆಗೆ ಹೋದ್ರೆ ನರೇಂದ್ರ ಮೋದಿ ಹವಾದ ಮುಂದೆ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬ ಕಾರಣ ಕೆಸಿಆರ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು.