ಮುಂಬೈ: ನಾವು ಇಪ್ಪತೈದು ವರ್ಷಗಳ ಕಾಲ ಹಾವಿಗೆ ಆಹಾರ ನೀಡಿದ್ದೇವೆ. ಈಗ ಅದೇ ಹಾವು ನಮ್ಮನ್ನು ಕುಕ್ಕುತ್ತಿದೆ. ಆದ್ರೆ ಈ ಹಾವನ್ನು ಹೇಗೆ ತುಳಿಯಬೇಕೆಂದು ನಮಗೆ ತಿಳಿದಿದೆ. ನಮ್ಮ ಮೇಲೆ ಆರೋಪ ಹೊರಿಸುವವರ ವಿರುದ್ಧ ತಲೆ ಎತ್ತಲು ನಾವು ಸಿದ್ಧರಿದ್ದೇವೆ ಎಂದು ಬಿಜೆಪಿ ವಿರುದ್ಧ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ರಾಜ್ಯ ಬಜೆಟ್ ಅಧಿವೇಶನಕ್ಕೂ ಮುನ್ನ ಮುಂಬೈನಲ್ಲಿ ಮಹಾ ವಿಕಾಸ್ ಅಘಾಡಿ ಎಂ.ವಿ.ಎ ಶಾಸಕರು ಹಾಗೂ ಮುಖಂಡರ ಜಂಟಿ ಸಭೆ ನಡೆಸಿದ ಉದ್ಧವ್ ಠಾಕ್ರೆ ಈ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಈ ಸಭೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಉಪಸ್ಥಿತರಿದ್ದರು.
ಕಳೆದ ಬಾರಿ ಬೆನ್ನುಹುರಿಯು ಶಸ್ತ್ರಚಿಕಿತ್ಸೆಯ ನಂತರ ಆರೋಗ್ಯ ಸಮಸ್ಯೆಗಳ ಕಾರಣ ಅಧಿವೇಶನದಲ್ಲಿ ಉದ್ಧವ್ ಠಾಕ್ರೆ ಅವರು ಪಾಲ್ಗೊಂಡಿರಲಿಲ್ಲ. ಆದ್ರೆ ಈ ಬಾರಿ ಬಜೆಟ್ ಅಧಿವೇಶನದಲ್ಲಿ ಶೇಕಡಾ 100ರಷ್ಟು ಕಡ್ಡಾಯವಾಗಿ ಹಾಜರಾಗಬೇಕೆಂದು ಶಾಸಕರಿಗೆ ಸೂಚನೆ ನೀಡಿದ್ದಾರೆ.
ಇದೇ ವೇಳೆ ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿರುವುದನ್ನು ಉಲ್ಲೇಖಿಸಿ ನನ್ನ ರಾಜಕೀಯ ಜೀವನದಲ್ಲಿ ಇಂತಹ ಪ್ರತೀಕಾರದ ಕೇಂದ್ರ ಸರ್ಕಾರವನ್ನು ನಾನು ಎಂದಿಗೂ ನೋಡಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.
ನವಾಬ್ ಮಲಿಕ್ ಬಂಧನದ ಬಳಿಕ ಮಮತಾ ಬ್ಯಾನರ್ಜಿ ಅವರು ತಮಗೆ ಕರೆ ಮಾಡಿ ತಮ್ಮ ಪಕ್ಷದ ನಾಲ್ವರು ಸಹೋದ್ಯೋಗಿಗಳನ್ನು ಜೈಲಿಗೆ ಹಾಕಿದ್ದು, ಈ ವಿಚಾರವಾಗಿ ಎಲ್ಲರೂ ಹೋರಾಡಲು ಒಂದಾಗಬೇಕು. ಇದರಿಂದ ಬಿಜೆಪಿ ಅವರನ್ನು ಸೋಲಿಸಬಹುದು ಎಂದು ಹೇಳಿರುವುದಾಗಿ ತಿಳಿಸಿದ್ರು.