ಬೆಂಗಳೂರು: ನವೀನ್ ಡ್ರೆಸ್ ಹೋಲುವ ಫೋಟೋ ಬಂದಿದೆ. ಈ ಕುರಿತು ವಿದೇಶಾಂಗ ಸಚಿವರ ಜೊತೆ ಮಾತನಾಡಿ, ಮೃತದೇಹವನ್ನು ತರುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ರು. ಮಾದ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿ, ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಗೆ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಡ್ರೆಸ್ ಹೋಲುವ ಫೋಟೋವನ್ನು ಅವರ ಸ್ನೇಹಿತರು ಕಳಿಸಿದ್ದಾರೆ. ಈ ಬಗ್ಗೆ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿಗೆ ಮಾತನಾಡುತ್ತೇನೆ.
ಆದಷ್ಟು ಬೇಗ ಮೃತದೇಹವನ್ನು ತೆಗೆದುಕೊಂಡು ಬರಲು ಎಲ್ಲಾ ಪ್ರಯತ್ನವನ್ನು ನಡೆಸುತ್ತಿದ್ದೇವೆ ಎಂದ್ರು. ಕನ್ನಡಿಗರು ವಾಪಸ್ ತರಲು ವೇಗ ಕೊಡುತ್ತೇವೆ. ಎರಡು, ಮೂರು ದಿನಗಳಲ್ಲಿ ಇಪ್ಪತ್ತಾರು ವಿಮಾನಗಳು ಬರಲಿವೆ. ಇದರಲ್ಲಿ ಕನ್ನಡಿಗರನ್ನು ಶೀಘ್ರವಾಗಿ ಕರೆಸಲು ಕ್ರಮ ತೆಗೆದುಕೊಳ್ಳುತ್ತೇವೆ. ಜೊತೆಗೆ ಯುದ್ಧ ನಡೆಯುತ್ತಿರುವುದರಿಂದ ಈ ಸಮಸ್ಯೆ ಆಗುತ್ತಿದೆ. ಭಾರತ ಸರ್ಕಾರ ಪ್ಲ್ಯಾನ್ ಮಾಡಿ ವಾರ್ ಝೋನ್ನಿಂದ ಬೇರೆ ಬೇರೆ ಕಡೆ ಕರೆಸುವ ಕೆಲಸ ಮಾಡುತ್ತಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ರು.
ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ. ಆದ್ರೆ ನಮ್ಮ ಮೊದಲ ಆದ್ಯತೆ ಅವರ ಮೃತದೇಹವನ್ನು ತರಿಸುವುದಾಗಿದೆ. ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಬೊಮ್ಮಾಯಿ, ಅವರ ಕುಟುಂಬ ಕೂಡಾ ದುಃಖದಲ್ಲಿದೆ. ಶವ ತರಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನವೀನ್ ಶವ ಬಂದ ನಂತರ ಪರಿಹಾರ ಕೊಡುತ್ತೇವೆ ಎಂದು ಬೊಮ್ಮಾಯಿ ಅವರು ಭರವಸೆಯನ್ನು ನೀಡಿದ್ರು.
ನವೀನ್ ಸ್ನೇಹಿತರ ಆರೋಗ್ಯ ವಿಚಾರವಾಗಿ ಮಾತನಾಡಿದ ಅವರು, ಒಂದು ಮಾಹಿತಿ ನವೀನ್ ಜೊತೆ ಇದ್ದರು ಅಂತ ಇದೆ. ಇನ್ನೊಂದು ಮಾಹಿತಿ ಇರಲಿಲ್ಲ ಅಂತ ಇದೆ. ಇವತ್ತು ಸಂಪೂರ್ಣ ಮಾಹಿತಿ ಈ ಬಗ್ಗೆ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ರು. ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ, ವಾರ್ ಝೋನ್ ಇರುವಾಗ ಕಾಂಗ್ರೆಸ್ ರಾಜಕಾರಣ ಮಾಡುತ್ತಾರೆ ಎಂದರೆ ಎಷ್ಟು ಕೆಳಗೆ ಇಳಿದ್ದಿದ್ದಾರೆ ಅಂತ ಗೊತ್ತಾಗುತ್ತದೆ. ಕಾಂಗ್ರೆಸ್ ಇದ್ದಾಗ ಎಷ್ಟೋ ಯುದ್ಧ ಆಗಿತ್ತು. ಆದ್ರೆ ಅವರು ಒಬ್ಬರನ್ನು ಕರೆದುಕೊಂಡು ಬಂದಿಲ್ಲ. ಆದ್ರೆ ಈಗ ಟೀಕೆ ಮಾಡುತ್ತಿದ್ದಾರೆ. ಮೋದಿ ಸರ್ಕಾರ ನಿರಂತರ ಪ್ರಕ್ರಿಯೆ ಮಾಡುತ್ತಿದೆ. ಆದ್ರೆ ಕಾಂಗ್ರೆಸ್ ರಾಜಕೀಯ ಮಾತ್ರ ಮುಖ್ಯವಾಗಿದೆ. ಇದು ಕಾಂಗ್ರೆಸ್ ಎಷ್ಟು ಕೆಳಗೆ ಇಳಿದಿದೆ ಅಂತ ತೋರಿಸುತ್ತದೆ ಎಂದು ಕಿಡಿಕಾರಿದರು.